ಮಲ್ಪೆ ಬೀಚ್‌ನಲ್ಲಿ ರಾಜ್ಯದ ಪ್ರಪ್ರಥಮ ತೇಲುವ ಸೇತುವೆಗೆ ಚಾಲನೆ
ಉಡುಪಿ : ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಮಲ್ಪೆ ಬೀಚ್‌ನಲ್ಲಿ ಸ್ಥಾಪಿಸಲಾಗಿರುವ ಕರ್ನಾಟಕ ರಾಜ್ಯದ ಪ್ರಪ್ರಥಮ ತೇಲುವ ಸೇತುವೆಗೆ ಶುಕ್ರವಾರ ಚಾಲನೆ ನೀಡಲಾಯಿತು.
100 ಮೀಟರ್ ಉದ್ದ ಹಾಗೂ ಮೂರೂವರೆ ಮೀಟರ್ ಅಗಲ ಇರುವ ಈ ಸೇತುವೆ ಉದ್ದಕ್ಕೂ ತಡೆಬೇಲಿಯನ್ನು ಹಾಕಲಾಗಿದೆ. 10 ವರ್ಷದಿಂದ 60ವರ್ಷ ಪ್ರಾಯದವರು ಇದರಲ್ಲಿ ನಡೆಯುವ ಮೂಲಕ ಹೊಸ ಅನುಭವ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ನಡೆಯುವವರಿಗೆ ಲೈಫ್ ಜಾಕೆಟ್ ಕಡ್ಡಾಯ ಮಾಡಲಾಗಿದೆ.
ಸುಮಾರು 80 ಲಕ್ಷ ರೂ. ವೆಚ್ಚದ ವಿದೇಶಿ ತಂತ್ರಜ್ಞಾನದಲ್ಲಿ ತಯಾರಿಸಿದ ಸೇತುವೆ ಇದಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ 10 ಜನ ಲೈಫ್ ಗಾರ್ಡ್, 30 ಮಂದಿ ಲೈಫ್ ಬಾಯ್ಸ್ ಮತ್ತು ಪ್ಯಾಟ್ರೋಲಿಂಗ್ ಮಾಡಲು ಒಂದು ಬೋಟು ನಿಯೋಜಿಸಲಾಗಿದೆ.
ಈ ಸೇತುವೆಯನ್ನು ಕೇವಲ ಮುಂದಿನ 15 ದಿನಗಳ ಕಾಲ ಪ್ರಾಯೋಗಿಕ ವಾಗಿ ಆಳವಡಿಸಲಾಗಿದೆ. ಮಳೆಗಾಲಕ್ಕೆ ಎಲ್ಲ ಜಲಕ್ರೀಡೆಗಳನ್ನು ಸ್ಥಗಿತಗೊಳಿಸು ತ್ತೇವೆ. ಮುಂದಿನ ಅವಧಿಯಲ್ಲಿ ಇದರಲ್ಲಿರುವ ಲೋಪಗಳನ್ನು ಸರಿಪಡಿಸಿ ಇನ್ನಷ್ಟು ಉತ್ತಮವಾಗಿ ಅಭಿವೃದ್ದಿ ಪಡಿಸಲಾಗುವುದು ಎಂದು ಮಲ್ಪೆ ಬೀಚ್‌ನ ಗುತ್ತಿಗೆ ದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.
ತೇಲುವ ಸೇತುವೆ ಉದ್ಘಾಟನೆ
ಸೇತುವೆಯನ್ನು ಉದ್ಘಾಟಿಸಿದ ಉಡುಪಿ ಶಾಸಕ ರಘುಪತಿ ಭಟ್ ಮಾತ ನಾಡಿ, ಮಲ್ಪೆಸಮುದ್ರ ತೀರದಲ್ಲಿ ನಿರ್ಮಾಣಗೊಂಡಿರುವ ತೇಲುವ ಸೇತುವೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲಿದೆ. ಪ್ರವಾಸಿಗರ ಸುರಕ್ಷತೆಗಾಗಿ ಎಲ್ಲ ರೀತಿಯ ಕ್ರಮಗಳನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಯುವಕರು ಪ್ರವಾಸಿಗರಿಗೆ ಗರಿಷ್ಠ ಭದ್ರತೆಯೊಂದಿಗೆ ಸಂತೋಷ ನೀಡುವ ಹೊಸ ಯೋಜನೆಗಳನ್ನು ಆರಂಭಿಸಲು ಕೋರಿದ್ದಲ್ಲಿ ಜಿಲ್ಲಾಡಳಿತ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿಯ ವತಿಯಿಂದ ಅಗತ್ಯ ಸಹಕಾರ ನೀಡಲಾಗು ವುದು. ಇದರಿಂದ ಪ್ರವಾಸಿಗರ ಮನೋರಂಜನೆಗೆ ಉತ್ತಮ ಅವಕಾಶ ಹಾಗೂ ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶ ದೊರೆತಂತಾಗುತ್ತದೆ. ಹಾಗಾಗಿ ಇಂತಹ ಯೋಜನೆಯ ಆವಿಷ್ಕಾರಗಳು ಹೆಚ್ಚಾಗಿ ಜಾರಿಗೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷ ಲಕ್ಷ್ಮಿ ಮಂಜುನಾಥ್, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ, ಮಂಜು ಕೊಳ, ಮಲ್ಪೆ ಎಸ್ಸೈ ಸಕ್ತಿವೇಲು, ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ, ಶೇಖರ್ ಪುತ್ರನ್, ಧನಂಜಯ ಕಾಂಚನ್ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.