ವಿಧಾನಪರಿಷತ್ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಕ್ರೈಸ್ತರ ಅವಗಣನೆ; ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಖಂಡನೆ
ಉಡುಪಿ : ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ಕ್ರೈಸ್ತ ಅಭ್ಯರ್ಥಿಗೆ ಅವಕಾಶ ನೀಡದಿರುವ ಕಾಂಗ್ರೆಸ್ ಪಕ್ಷದ ನಿಲುವನ್ನು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಡಿಯೋನ್ ಡಿಸೋಜಾ ಖಂಡಿಸಿದ್ದು, ಇದು ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಹೇಳಿದ್ದಾರೆ.
ಐವನ್ ಡಿಸೋಜಾರಂತಹ ನಾಯಕರ ಹೆಚ್ಚಿನ ಪ್ರಾತಿನಿಧ್ಯ ಮತ್ತು ಪಕ್ಷದ ಬದ್ಧತೆಯನ್ನು ಕೆಪಿಸಿಸಿ ಪದೇ ಪದೇ ಕಡೆಗಣಿಸುತ್ತಿದೆ. ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಕೇಂದ್ರದವರೆಗಿನ ಇತ್ತೀಚಿನ ಅನೇಕ ಚುನಾವಣೆಗಳಲ್ಲಿ ಕ್ರಿಶ್ಚಿಯನ್ನರನ್ನು ದೃಢವಾದ ಮತ ಬ್ಯಾಂಕ್ ಎಂದು ಪರಿಗಣಿಸುವ ಕಾಂಗ್ರೆಸ್ ವಾಸ್ತವದಿಂದ ದೂರವಿದೆ ಎಂದು ಅವರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಕ್ರಿಶ್ಚಿಯನ್ ಸಮುದಾಯ ಅಲ್ಪಸಂಖ್ಯಾತರಾಗಿದ್ದರೂ, ದೇಶಾದ್ಯಂತ ನಿಷ್ಪಕ್ಷಪಾತ ಮತ್ತು ಪಾರದರ್ಶಕ ಚುನಾವಣೆಗಳಲ್ಲಿ ಭಾಗವಹಿಸುವ ಮೂಲಕ ಪ್ರಮುಖ ಪಾತ್ರ ವಹಿಸುತ್ತಿದೆ. ಕಾಂಗ್ರೆಸ್ ಪಕ್ಷದ ಜನಪರ ಕೆಲಸ ಮತ್ತು ಪ್ರಾಮಾಣಿಕತೆ ಯನ್ನು ಮೆಚ್ಚುವ ಮೂಲಕ ಕ್ರಿಶ್ಚಿಯನ್ನರು ಯಾವಾಗಲೂ ಪಕ್ಷದ ಕಡೆಗೆ ತಮ್ಮ ಒಲವನ್ನು ತೋರಿಸಿದ್ದಾರೆ ಎನ್ನುವುದನ್ನು ಪಕ್ಷ ಮರೆತಿದೆ. ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಪ್ರಾತಿನಿಧ್ಯವನ್ನು ಕಡೆಗಣಿಸಿರುವ ಕಾಂಗ್ರೆಸ್‌ನ ನಿರ್ಧಾರಗಳು ಸಮುದಾಯಕ್ಕೆ ನೋವನ್ನು ತಂದಿದ್ದು, ರಾಜಕೀಯದಲ್ಲಿ ಕ್ರಿಶ್ಚಿಯನ್‌ಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಪಕ್ಷದ ನಿರ್ಲಕ್ಷ್ಯತನವನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮೇಲ್ಮನೆಯಲ್ಲಿ ಕ್ರೈಸ್ತ ಸಮುದಾಯಕ್ಕೆ ಒಂದೇ ಒಂದು ಪ್ರಾತಿನಿಧ್ಯ ಇಲ್ಲದಿರುವಾಗ ಮತ್ತೊಬ್ಬ ಮುಸ್ಲಿಂ ಅಭ್ಯರ್ಥಿಯ ಅಗತ್ಯ ಏನಿತ್ತು? ಈಗಿನ ಕೋಮುವಾದಿ ಬಿಜೆಪಿ ಸರಕಾರದಿಂದ ಕ್ರೈಸ್ತರು ಸಮಸ್ಯೆ ಎದುರಿ ಸುತ್ತಿರುವುದು ಕಾಂಗ್ರೆಸ್ ಪಕ್ಷ ಮರೆತಿದೆಯೇ? ಅಥವಾ ಮುಂದಿನ ದಿನಗಳಲ್ಲಿ ಕ್ರಿಶ್ಚಿಯನ್ ಪ್ರಾತಿನಿಧ್ಯ ಅಥವಾ ಮತಗಳು ಮುಖ್ಯವಲ್ಲ ಎಂದು ಕಾಂಗ್ರೆಸ್ ಭಾವಿಸುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ದೇಶದ ಕಾನೂನು ಮತ್ತು ಸಂಸ್ಕೃತಿಯನ್ನು ಪಾಲಿಸುವ ನಿಷ್ಠಾವಂತ ಕ್ರಿಶ್ಚಿಯನ್ ಸಮುದಾಯ ಕಾಂಗ್ರೆಸ್‌ನಿಂದ ಬಹಳ ದೂರದಲ್ಲಿದೆ. ಸಮುದಾಯದ ಹಕ್ಕುಗಳನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಪದೇ ಪದೇ ಸಮುದಾಯ ವನ್ನು ನಿರ್ಲಕ್ಷಿಸಿದರೆ ಪಕ್ಷದ ಆಯ್ಕೆಯ ಮನಸ್ಥಿತಿಯನ್ನು ಬದಲಾಯಿಸಬಹುದು ಎಂದು ಡಿಯೋನ್ ಡಿಸೋಜಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.