ಉಡುಪಿ ಸರಕಾರಿ ತಾಯಿ -ಮಕ್ಕಳ ಆಸ್ಪತ್ರೆಯ ಪರಿಕರಗಳ ಸಾಗಾಟಕ್ಕೆ ತಡೆ

Update: 2022-05-30 14:52 GMT

ಉಡುಪಿ : ಸರಕಾರ ಮುನ್ನಡೆಸಲು ಒಂದು ದಿನ ಬಾಕಿ ಇರುವಾಗಲೇ ಉಡುಪಿ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕೆಲವು ಪರಿಕರಗಳನ್ನು ಬಿ.ಆರ್.ಶೆಟ್ಟಿ ಮಾಲಕತ್ವದ ಬಿಆರ್‌ಎಸ್ ಲೈಫ್ ಗ್ರೂಪ್ ಸೋಮವಾರ ಸಾಗಾಟಕ್ಕೆ ಯತ್ನಿಸಿದ್ದು, ಈ ಬಗ್ಗೆ ಮಾಹಿತಿ ದೊರೆತು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸರ್ಜನ್ ಇದಕ್ಕೆ ತಡೆಯೊಡ್ಡಿರುವ ಬಗ್ಗೆ ವರದಿಯಾಗಿದೆ.

ಆರ್ಥಿಕ ನಷ್ಟದಿಂದಾಗಿ ಬಿ.ಆರ್.ಶೆಟ್ಟಿ ಮಾಲಕತ್ವದ ಬಿಆರ್‌ಎಸ್ ಲೈಫ್ ಗ್ರೂಪಿಗೆ ಮುನ್ನಡೆಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರ ಸುಪರ್ದಿಗೆ ಪಡೆದುಕೊಂಡಿತ್ತು. ಈ ಆಸ್ಪತ್ರೆಯನ್ನು ಸರಕಾರ ಮೇ 16ರಿಂದ ಮುನ್ನಡೆಸಲು ತೀರ್ಮಾನಿಸಿತ್ತು. ಆದರೆ ಆ ದಿನಾಂಕವನ್ನು ಜೂ.1ಕ್ಕೆ ಮುಂದೂಡಲಾಗಿತ್ತು.

ಇದೀಗ ಆಸ್ಪತ್ರೆಯನ್ನು ಸರಕಾರಕ್ಕೆ ಬಿಟ್ಟು ಕೊಡಲು ಒಂದು ದಿನ ಬಾಕಿ ಇರುವಾಗಲೇ ಬಿಆರ್‌ಎಸ್ ಲೈಫ್ ಗ್ರೂಪಿನವರು ಆಸ್ಪತ್ರೆಯಲ್ಲಿದ್ದ ಸೋಫಾ, ಕಾಪಾಟು, ಚೈಯರ್, ಟೇಬಲ್ ಸೇರಿದಂತೆ ಕೆಲವು ಪರಿಕರಗಳನ್ನು ಜಿಲ್ಲಾ ಸರ್ಜನ್‌ಗೆ ಯಾವುದೇ ಮಾಹಿತಿ ನೀಡದೆ ಲಾರಿಯಲ್ಲಿ ಲೋಡ್ ಮಾಡಿ ಕೊಂಡು ಸಾಗಿಸಲು ಯತ್ನಿಸುತ್ತಿದ್ದರು.

ಈ ಬಗ್ಗೆ ಸಾರ್ವಜನಿಕರಿಂದ ಬಂದ ಕರೆಯಂತೆ ಸ್ಥಳಕ್ಕೆ ಆಗಮಿಸಿದ ಸರ್ಜನ್ ಡಾ.ಮದುಸೂಧನ್ ನಾಯಕ್, ಪರಿಕರಗಳ ಸಾಗಾಟಕ್ಕೆ ತಡೆಯೊಡ್ಡಿದ್ದರು. ಬಳಿಕ ಸರ್ಜನ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಆಗಮಿಸಿದ ಪೊಲೀಸರು ಎಲ್ಲ ಪರಿಕರಗಳನ್ನು ವಾಪಾಸ್ಸು ಆಸ್ಪತ್ರೆಯೊಳಗೆ ಇಡುವಂತೆ ಸೂಚಿ ಸಿದರು. ಆ ಮೂಲಕ ಎಲ್ಲ ಪರಿಕರಗಳನ್ನು ಲಾರಿಯಿಂದ ಕೆಳಗೆ ಇಳಿಸಿ ಆಸ್ಪತ್ರೆ ಯೊಳಗೆ ಇಡುವ ಮೂಲಕ ಯಥಾಸ್ಥಿತಿ ಕಾಪಾಡಲಾಯಿತು.

ಸಂಬಳ ಸರಕಾರ ಮಟ್ಟದಲ್ಲಿ ತೀರ್ಮಾನ: ಸರ್ಜನ್ 

ಇಲ್ಲಿನ ಸಿಬ್ಬಂದಿಗಳ ಬಾಕಿ ಸಂಬಳದ ವಿಚಾರ ಮೇಲಾಧಿಕಾರಿಗಳ ಗಮನಕ್ಕೆ ಬಂದಿದೆ. ಗ್ರೂಪ್ ಡಿ ಸಿಬ್ಬಂದಿಗೆ ಮಾರ್ಚ್‌ನಿಂದ ಮೂರು ತಿಂಗಳು ಹಾಗೂ ಉಳಿದವರಿಗೆ ಐದು ತಿಂಗಳಿನಿಂದ ಸಂಬಳ ಬಾಕಿ ಇದೆ. ಆ ಬಗ್ಗೆ ಸರಕಾರ ಮಟ್ಟದಲ್ಲಿ ತೀರ್ಮಾನ ಆಗಬೇಕಾಗಿದೆ ಎಂದು ಜಿಲ್ಲಾ ಸರ್ಜನ್ ಡಾ.ಮಧು ಸೂದನ್ ನಾಯಕ್ ತಿಳಿಸಿದರು.

೨೦೦ ಬೆಡ್‌ಗಳ ಈ ಆಸ್ಪತ್ರೆಗೆ ಒಟ್ಟು ೧೦೦ ಹುದ್ದೆ ಮಂಜೂರಾಗಿದೆ. ಎನ್‌ಆರ್‌ಎಚ್‌ಎಂನ ೫೪ ಹುದ್ದೆಗಳಿವೆ. ಒಟ್ಟು ೧೫೪ ಹುದ್ದೆಗಳಿವೆ. ಸುಮಾರು ೭೮ ಹುದ್ದೆ ಭರ್ತಿ ಮಾಡಿ ಆದೇಶ ಆಗಿದ್ದು, ಆ ಆದೇಶ ಇನ್ನು ತಲುಪ ಬೇಕಾಗಿದೆ. ನಮ್ಮಲ್ಲಿ ವೈದ್ಯರ ಕೊರತೆ ಇಲ್ಲ. ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಂಡು ಸದ್ಯಕ್ಕೆ ಆಸ್ಪತ್ರೆಯನ್ನು ಮುನ್ನಡೆಸಲಾಗುವುದು ಎಂದು ಅವರು ಹೇಳಿದರು.

ಈ ಆಸ್ಪತ್ರೆಯಲ್ಲಿ ಈ ಹಿಂದೆ ೮೦ ಸ್ಟಾಪ್ ನರ್ಸ್‌ಗಳಿದ್ದರೆ, ಈಗ ೨೦ ಮಂದಿ ಮಾತ್ರ ಇದ್ದಾರೆ. ಅವರಲ್ಲಿ ೧೨ ಮಂದಿ ನಮಗೆ ಪತ್ರ ಕೊಟ್ಟಿದ್ದು, ಅವರನ್ನು ನಾವು ಮುಂದುವರೆಸುತ್ತೇವೆ. ಅದೇ ರೀತಿ ಆರು ಮಂದಿ ಸೆಕ್ಯುರಿಟಿಗಳನ್ನು ಕೂಡ ತೆಗೆದುಕೊಳ್ಳಲಾಗುವುದು. ಹೌಸ್ ಕೀಪಿಂಗ್ ೧೪ ಹುದ್ದೆಗಳು ಮಂಜೂರಾಗಿದೆ ಎಂದು ಅವರು ತಿಳಿಸಿದರು.

"ಜೂನ್ ಒಂದರಿಂದ ಸರಕಾರವೇ ಈ ಆಸ್ಪತ್ರೆಯನ್ನು ನಡೆಸುತ್ತದೆ. ಅದರ ಮಧ್ಯೆ ಇಲ್ಲಿನ ಪರಿಕರಗಳನ್ನು ಸಾಗಿಸಲಾಗುತ್ತಿದೆ ಎಂಬ ದೂರಿನ ಕರೆಯಂತೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದೇವೆ. ಯಥಾಸ್ಥಿತಿಯಲ್ಲಿ ಆಸ್ಪತ್ರೆಯನ್ನು ಬಿಟ್ಟು ಕೊಡುವುದಾಗಿ ಮಾತು ಕೊಟ್ಟಿರುವುದರಿಂದ ಸದ್ಯಕ್ಕೆ ಇಲ್ಲಿನ ಪರಿಕರಗಳನ್ನು ತೆಗೆದು ಕೊಂಡು ಹೋಗುವುದು ಬೇಡ ಎಂದು ತಿಳಿಸಿದ್ದೇವೆ. ಮುಂದೆ ಈ ಬಗ್ಗೆ ಪತ್ರ ಬರೆದರೆ, ನಾವು ಮೇಲಾಧಿಕಾರಿ ತಿಳಿಸಿ ಅದರ ಬಗ್ಗೆ ತೀರ್ಮಾನ ತೆಗೆದು ಕೊಳ್ಳುತ್ತೇವೆ".
-ಡಾ.ಮಧುಸೂದನ್ ನಾಯಕ್, ಜಿಲ್ಲಾ ಸರ್ಜನ್.

"ಬಿಆರ್‌ಎಸ್ ಗ್ರೂಪ್‌ನ ನಿರ್ದೇಶಕ ಡಾ.ಶಿಶಿರ್ ಶೆಟ್ಟಿ ಆದೇಶದ ಮೇರೆಗೆ ಕಚೇರಿ ಪರಿಕರಗಳನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ರೋಗಿಗಳಿಗೆ ಸಂಬಂಧ ಪಟ್ಟ ಯಾವುದೇ ಸೊತ್ತುಗಳನ್ನು ತೆಗೆದುಕೊಂಡು ಹೋಗುತ್ತಿಲ್ಲ. ಆದರೆ ಸರ್ಜನ್ ತೆಗೆದುಕೊಂಡು ಹೋದರೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಅದರಂತೆ ನಾವು ವಾಪಾಸ್ಸು ಇಟ್ಟಿದ್ದೇವೆ. ಇದೀಗ ಡಾ.ಶಿಶಿರ್ ಜಿಲ್ಲಾ ಸರ್ಜನ್‌ಗೆ ಈ ಕುರಿತು ಇಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ".
-ಡಾ.ಸ್ವರ್ಣಲತಾ, ವೈದ್ಯಕೀಯ ಅಧೀಕ್ಷಕಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News