ಇವರ ವೈಫಲ್ಯಕ್ಕೆ ಇನ್ನೊಂದು ಸಾಕ್ಷಿ ಕಾಶ್ಮೀರ
ಈ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಮಸೀದಿಗಳಡಿಯಲ್ಲಿ ಶಿವಲಿಂಗಗಳನ್ನು ಹುಡುಕುತ್ತ, ಯಾರು ಯಾವ ಬಟ್ಟೆ ತೊಡಬೇಕು, ಯಾರು ಯಾವ ಊಟ ಮಾಡಬೇಕು ಎಂದು ಪ್ರಜೆಗಳಿಗೆ ನಿರ್ದೇಶನ ನೀಡುತ್ತ, ಅದಕ್ಕಾಗಿ ಗೂಂಡಾ ಗ್ಯಾಂಗುಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ. ಈ ಫ್ಯಾಶಿಸ್ಟ್ ದುರಾಡಳಿತ ಕೊನೆಯಾಗಬೇಕೆಂದರೆ ಇವರ ಕೈಯಿಂದ ರಾಜಕೀಯ ಅಧಿಕಾರವನ್ನು ಜನರು ಕಿತ್ತು ಕೊಳ್ಳಬೇಕು. ಸೆಕ್ಯುಲರ್ ಮತಗಳು ವಿಭಜನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅದೊಂದೇ ಈಗ ಉಳಿದ ದಾರಿಯಾಗಿದೆ.
ಗುಜರಾತ್ ಹತ್ಯಾಕಾಂಡದ ಪ್ರಸ್ತಾಪ ಮಾಡಿದಾಗೆಲ್ಲ ಕಾಶ್ಮೀರ ಪಂಡಿತರ ಸಮಸ್ಯೆಗಳನ್ನು ಉಲ್ಲೇಖಿಸಿ ಅವರ ತಾಪತ್ರಯಗಳನ್ನು ಬಂಡವಾಳ ಮಾಡಿಕೊಂಡ ಭಾರತೀಯ ಜನತಾ ಪಕ್ಷದ ಸರಕಾರ ಈ ನೊಂದ ಸಮುದಾಯಕ್ಕೆ ನೀಡಿದ್ದೇನು? ಅವರ ದಾರುಣ ಪರಿಸ್ಥಿತಿಯ ಮೇಲೆ ಸಿನೆಮಾ ಮಾಡಿಸಿ, ಅದಕ್ಕೆ ತೆರಿಗೆ ವಿನಾಯಿತಿ ನೀಡಿ ಮತ್ತು ದೇಶದ ಎಲ್ಲೆಡೆ ಪುಗಸೆಟ್ಟೆ ತೋರಿಸಿ ಓಟಿನ ಬೆಳೆ ತೆಗೆಯಲು ಯತ್ನಿಸಿತು.
ಇತ್ತೀಚೆಗೆ ಎಂಟು ವರ್ಷಗಳ ತನ್ನ ಆಡಳಿತದ ಸಾಧನೆಗೆ ತನ್ನ ಬೆನ್ನು ತಾನೇ ಚಪ್ಪರಿಸಿಕೊಂಡ ಮೋದಿ ಸರಕಾರ ಕಾಶ್ಮೀರಕ್ಕೆ ಇದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿತು. ಅದಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಅಲ್ಲಿ ಭೂಮಿ ಖರೀದಿಸಲು, ಅಲ್ಲಿನ ಯುವತಿಯರನ್ನು ಮದುವೆ ಯಾಗಲು ಅನೇಕ ಭಕ್ತರು ಜಾಲತಾಣದಲ್ಲಿ ಆಸೆ ವ್ಯಕ್ತಪಡಿಸಿ ಬಾಯಿ ಚಪ್ಪರಿಸ ತೊಡಗಿದರು. ಆದರೆ, ವಾಸ್ತವವಾಗಿ ಕಾಶ್ಮೀರದಲ್ಲಿ ಹಿಂದೂ ಪಂಡಿತರು ತಮ್ಮನ್ನು ಕೂಡಿ ಹಾಕಿ ಚಿತ್ರಹಿಂಸೆಗೆ ಗುರಿಪಡಿಸಿದ ಮೋದಿ ನೇತೃತ್ವದ ಸಂಘೀ ನಿಯಂತ್ರಿತ ಬಿಜೆಪಿ ಸರಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಒಂದೇ ರಾಜ್ಯ. ಅಲ್ಲಿನ ರಾಜ ಹರಿಸಿಂಗ್ ಭಾರತದಲ್ಲಿ ಅದನ್ನು ವಿಲೀನಗೊಳಿಸಲು ಒಪ್ಪದೇ ಚಂಡಿ ಹಿಡಿದಾಗ ಶೇಖ್ ಅಬ್ದುಲ್ಲಾ ಎಂಬ ದೇಶಪ್ರೇಮಿ ಯುವಕ, 'ಕಾಶ್ಮೀರಕ್ಕೆ ಅದರದ್ದೇ ಆದ ಐಡೆಂಟಿಟಿ ಇದ್ದರೂ ಅದು ಭಾರತದ ಭಾಗ' ಎಂದು ಹೇಳಿ ಜನರನ್ನು ಸಂಘಟಿಸಿ ಭಾರತದ ಜೊತೆ ವಿಲೀನವಾಗಲು ಸಹಕರಿಸಿದ್ದು ಇತಿಹಾಸ. ಆದರೆ, ಇದನ್ನು ಒಪ್ಪದ ಆರೆಸ್ಸೆಸ್ ಈ ರಾಜ್ಯ ವನ್ನು ಮೂರು ಭಾಗಗಳಾಗಿ ವಿಭಜಿಸಲು ಮಸಲತ್ತು ನಡೆಸುತ್ತ ಬಂದಿತ್ತು.
ಕಾಶ್ಮೀರ ಮುಸಲ್ಮಾನರಿಗೆ, ಜಮ್ಮು ಹಿಂದೂಗಳಿಗೆ, ಲಡಾಖ್ ಬೌದ್ಧರಿಗೆ ಎಂದು ವಿಭಜಿಸಿತು. ಮೋದಿ ಸರಕಾರ ಸಂಘಪರಿವಾರದ ಕಾರ್ಯ ಸೂಚಿ ಯನ್ನು ಜಾರಿಗೆ ತರಲು ಹೋಗಿ ಪಂಡಿತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಹಿಂದಿನ ಸರಕಾರಗಳು ಕಾಶ್ಮೀರ ಪಂಡಿತರಿಗೆ ರಕ್ಷಣೆ ನೀಡಲಿಲ್ಲ.ಈಗ ನಿಮ್ಮದೇ ಸರಕಾರವಿದೆ. ಸೇನೆ, ಪೊಲೀಸ್, ಅರೆ ಸೇನಾ ಪಡೆ, ಗಡಿ ಭದ್ರತಾ ಪಡೆ ಹೀಗೆ ಎಲ್ಲವೂ ನಿಮ್ಮ ಕೈಯಲ್ಲಿದೆ. ಎಪ್ಪತ್ತು ವರ್ಷ ಹಾಳಾಗಿದ್ದ ದೇಶವನ್ನು ಉದ್ಧಾರ ಮಾಡಲು ಬಂದಿರುವುದಾಗಿ ಪ್ರಚಾರ ಮಾಡಿಕೊಳ್ಳುತ್ತಿರುವ ನಿಮಗೆ ಕಾಶ್ಮೀರದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ? ಈವರೆಗೆ ಅಂದರೆ 2020 ಜೂನ್ ತಿಂಗಳಿನಿಂದ 2022ರ ಮೇ 31 ರವರೆಗೆ ಉಗ್ರರ ದಾಳಿಗೆ ಹನ್ನೊಂದು ಮಂದಿ ಧಾರ್ಮಿಕ ಅಲ್ಪಸಂಖ್ಯಾತರು ಬಲಿಯಾಗಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ನೂರಾರು ವರ್ಷಗಳಿಂದ ನೆಲೆಸಿರುವ ಪಂಡಿತರಿಗೆ ರಕ್ಷಣೆ ನೀಡಲು ಮೋದಿ ಸರಕಾರ ವಿಫಲಗೊಂಡಿದೆ.ತಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕೆಂದು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕಾಶ್ಮೀರಿ ಪಂಡಿತ ಸಂಘರ್ಷ ಸಮಿತಿ ಜಮ್ಮು-ಕಾಶ್ಮೀರ, ಲಡಾಖ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಕೇಂದ್ರ ಸರಕಾರ ನಮ್ಮನ್ನು ಕೂಡಿ ಹಾಕಿದೆ. ಎಲ್ಲೂ ಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಿದೆ.
ಕಾಶ್ಮೀರದಲ್ಲಿ ನಾವು ಸುರಕ್ಷಿತವಾಗಿ ಇಲ್ಲ. ಇಲ್ಲಿ ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ. ನಾವು ಸುರಕ್ಷಿತ ಪ್ರದೇಶಗಳಿಗೆ ಹೋಗಲು ಬಯಸುತ್ತೇವೆ. ಆದರೆ, ಸರಕಾರ ಇಲ್ಲಿಂದ ಬೇರೆ ಕಡೆ ಹೋಗಲು ಬಿಡುತ್ತಿಲ್ಲ. ಕಾಶ್ಮೀರ ಪಂಡಿತರು ನೆಲೆಸಿರುವ ಶಿಬಿರಗಳ ಬಾಗಿಲುಗಳಿಗೆ ಸರಕಾರ ಬೀಗ ಜಡಿದಿದೆ. 'ಸರಕಾರ ಬಲವಂತವಾಗಿ ನಮ್ಮನ್ನು ಕೂಡಿ ಹಾಕಿದೆ' ಎಂದು ಪಂಡಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಲ್ಲಿ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಅಂದರೆ 'ಕಾಶ್ಮೀರ ಕಣಿವೆಯಿಂದ ಹೊರಗೆ ಹೋಗಲು ನಮಗೆ ಅವಕಾಶ ನೀಡಿ. ಇಲ್ಲದಿದ್ದರೆ, ಪೊಲೀಸರ ಮೇಲೆ ಕಾಶ್ಮೀರಿ ಪಂಡಿತರೂ ಕಲ್ಲು ತೂರಬೇಕಾಗುತ್ತದೆ' ಎಂದು ಮತ್ತಾನ ಶಿಬಿರದಲ್ಲಿ ಕೂಡಿ ಹಾಕಲ್ಪಟ್ಟಿರುವ ಪಂಡಿತರು ಮೋದಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಅಂದರೆ ಪ್ರಧಾನಿ ನರೇಂದ್ರ ಮೋದಿ ಯವರ ಸರಕಾರಕ್ಕೆ ಆಪ್ತರಾಗಿದ್ದ ಕಾಶ್ಮೀರದಲ್ಲಿ ನಿಯೋಜಿಸಲ್ಪಟ್ಟಿದ್ದ ಹಲವು ಅಧಿಕಾರಿಗಳು ಈಗಾಗಲೇ ಅಲ್ಲಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಮೋದಿ ನೇತೃತ್ವದ ನಾಗಪುರ ನಿಯಂತ್ರಿತ ಬಿಜೆಪಿ ಸರಕಾರದ ಕಾಶ್ಮೀರ ನೀತಿ ಸಂಪೂರ್ಣ ವಿಫಲಗೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಕಾಶ್ಮೀರ ಪಂಡಿತರನ್ನು ಭಯೋತ್ಪಾದಕರ ಬಂದೂಕಿನ ಬಾಯಿಗೆ ಕೊಟ್ಟು ಅವರ ಕಳೇಬರಗಳನ್ನು ದೇಶದ ಜನರಿಗೆ ತೋರಿಸಿ ಹಿಂದೂ ಓಟ್ ಬ್ಯಾಂಕ್ ನಿರ್ಮಿಸಿ ಮತ್ತೆ ಚುನಾವಣೆಯನ್ನು ಗೆಲ್ಲಲು ಮಸಲತ್ತು ನಡೆಸಿದೆ.
ಇದು ಕಾಶ್ಮೀರ ನೀತಿಯ ವೈಫಲ್ಯವಾದರೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಹಳ್ಳ ಹಿಡಿಸಿದ ಶ್ರೇಯಸ್ಸು ಈ ಸರಕಾರಕ್ಕೆ ಸಲ್ಲಬೇಕು.
ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದಿಂದ ನಿಯಂತ್ರಿಸಲ್ಪಡುತ್ತಿರುವ ಈ ಸರಕಾರ ಮೊದಲ ಅವಧಿಯಲ್ಲಿ ಐದು ವರ್ಷ ಆಡಳಿತ ಪೂರ್ಣಗೊಳಿಸಿ, ಎರಡನೇ ಅವಧಿಗೆ ಮತ್ತೆ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಪೂರೈಸಿದೆ. ಈ ಎಂಟು ವರ್ಷಗಳಲ್ಲಿ ಈ ಸರಕಾರದ ಸಾಧನೆ ಏನು? ಸಾಧನೆ ಹೋಗಲಿ ಹಿಂದೆ ಸಾಧಿಸಿದ್ದನ್ನಾದರೂ ಇದು ಉಳಿಸಿಕೊಂಡಿದೆಯೇ? ಭಾರತ ಸ್ವಾತಂತ್ರ ಪಡೆದಾಗ ಇದು ಔದ್ಯಮಿಕವಾಗಿ, ಶೈಕ್ಷಣಿಕವಾಗಿ, ಕೃಷಿ ಉತ್ಪಾದನೆ ಯಲ್ಲಿ ಹಿಂದುಳಿದ ದೇಶವಾಗಿತ್ತು. ಭಾರತದ ಮೊದಲ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಪಂಡಿತ್ ಜವಾಹರಲಾಲ್ ನೆಹರೂ ನಂತರ ಮನಮೋಹನ್ ಸಿಂಗ್‌ರವರೆಗೆ ಈ ದೇಶದ ಸಾರಥ್ಯ ವಹಿಸಿದವರೆಲ್ಲ ಭಾರತವನ್ನು ಕೈಗಾರಿಕೆ, ಕೃಷಿ, ವೈಜ್ಞಾನಿಕ ಸಾಧನೆ, ವೈದ್ಯಕೀಯ ಕ್ಷೇತ್ರದಲ್ಲಿ ಮುಂದುವರಿದ ದೇಶವ ನ್ನಾಗಿ ಮಾಡಿದರು. ವಿಶೇಷವಾಗಿ ನೆಹರೂ ಅವರ ಕಾಲಾವಧಿಯಲ್ಲಿ ಸಾರ್ವಜನಿಕ ಉದ್ಯಮ ರಂಗಕ್ಕೆ ಅಡಿಪಾಯ ಹಾಕಲಾಯಿತು. ಅಂದಿನ ಸಮಾಜವಾದಿ ಸೋವಿಯತ್ ರಶ್ಯದ ನೆರವಿನಿಂದ ಬಿಲಾಯಿನಂಥ ಉಕ್ಕಿನ ಕಾರ್ಖಾನೆಗಳು ಸ್ಥಾಪನೆಯಾದವು. ನಂತರ ಪಿ.ವಿ.ನರಸಿಂಹರಾವ್ ಕಾಲ ದಲ್ಲಿ ಜಾಗತೀಕರಣ ವಕ್ಕರಿಸಿದಾಗ ಸಾರ್ವಜನಿಕ ಉದ್ಯಮ ರಂಗಕ್ಕೆ ಆದ್ಯತೆ ಕಡಿಮೆಯಾಯಿತು.ಆದರೆ ಅವುಗಳಿಗೆ ಹೆಚ್ಚಿನ ಧಕ್ಕೆ ತರಲಿಲ್ಲ. ಆದರೆ, ಮೋದಿ ಸರಕಾರದ ಸಾಧನೆಯೆಂದರೆ ಎಪ್ಪತ್ತು ವರ್ಷಗಳಲ್ಲಿ ಗಳಿಸಿದ ರಾಷ್ಟ್ರದ ಸಂಪತ್ತನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವುದನ್ನು ಬಿಟ್ಟರೆ ಇನ್ಯಾವುದೂ ಇಲ್ಲ. ಇವರ ಕಾಲಾವಧಿಯಲ್ಲಿ ದುಡಿಯುವ ಜನರ, ಬಡ ಭಾರತೀಯರ ಸಮಾಧಿಯ ಮೇಲೆ ಅಂಬಾನಿ, ಅದಾನಿಗಳ ಕಾರ್ಪೊರೇಟ್ ಸಾಮ್ರಾಜ್ಯ ಅನಾವರಣಗೊಂಡಿದೆ.
ಆರ್ಥಿಕವಾಗಿ ದೇಶವನ್ನು ದಿವಾಳಿಯೆಬ್ಬಿಸಿದ ಈ ಸರಕಾರ ಜನರನ್ನು ನೆಮ್ಮದಿಯಾಗಿರಲು ಬಿಡಲಿಲ್ಲ. ತನ್ನ ರಾಜಕೀಯ ಲಾಭಕ್ಕಾಗಿ ಜಾತಿ,ಮತದ ಹೆಸರಿನಲ್ಲಿ ವೈಷಮ್ಯದ ವಿಷಬೀಜ ಬಿತ್ತುತ್ತ ಬಹುತ್ವ ಭಾರತವನ್ನು ಕೋಮು ಕಲಹದ ಬೆಂಕಿಗೆ ತಳ್ಳಿದ ಈ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮಸೀದಿ, ದರ್ಗಾ, ಚರ್ಚ್‌ಗಳನ್ನು ಅಗೆದು ಶಿವಲಿಂಗ ಮತ್ತು ಮಂದಿರಗಳನ್ನು ಹುಡುಕುವ ದುಸ್ಸಾಹಸಕ್ಕೆ ಕೈ ಹಾಕಿದೆ.ಭಾರತದ ಯಾರೂ ನೆಮ್ಮದಿಯಿಂದ ಇರಲಾಗದಂಥ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಕೋವಿಡ್ ಕಾಲದಲ್ಲಿ ಬಡವರ ಬದುಕು ಮೂರಾಬಟ್ಟೆಯಾದರೆ ಕಾರ್ಪೊ ರೇಟ್ ಖದೀಮರು ದಿನಕ್ಕೆ ಲಕ್ಷಾಂತರ ಕೋಟಿ ರೂ. ಕೊಳ್ಳೆ ಹೊಡೆದರು. ಇನ್ನೊಂದೆಡೆ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕು ಅಸಹನೀಯ ವಾಗಿದೆ. ಇವರು ಅಧಿಕಾರಕ್ಕೆ ಬರುವ ಮುನ್ನ ರೂ .350ಕ್ಕೆ ಸಿಗುತ್ತಿದ್ದ ಅಡುಗೆ ಅನಿಲದ ಸಿಲಿಂಡರ್ ಈಗ ರೂ. 1,060 ದಾಟಿದೆ. ಆದರೂ ಭಾರತದ ಜನರು ನಾಚಿಕೆಯಿಂದ ತಲೆ ತಗ್ಗಿಸುವ ಕೆಲಸವನ್ನು ತಾವು ಮಾಡಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಭಾರತದ ಆರ್ಥಿಕತೆಯನ್ನು ಹಳ್ಳ ಹಿಡಿಸಿದ ನೋಟು ಅಮಾನ್ಯೀಕರಣದ ಅವಾಂತರವನ್ನು ಅವರು ಮರೆತಂತೆ ಕಾಣುತ್ತದೆ. ಕೋವಿಡ್ ಸಾಂಕ್ರಾಮಿಕದ ಎರಡೂ ಅಲೆಗಳನ್ನು ಅತ್ಯಂತ ಕೆಟ್ಟದಾಗಿ ನಿಭಾಯಿಸಿದ್ದು ಅವರಿಗೆ ನೆನಪಿಲ್ಲ. ಯಾವ ಮುನ್ಸೂಚನೆಯೂ ನೀಡದೆ ಲಾಕ್‌ಡೌನ್ ಘೋಷಣೆ ಮಾಡಿದ ಪರಿಣಾಮವಾಗಿ ದೂರದ ನಗರಗಳಲ್ಲಿ ದುಡಿಯಲು ಹೋಗಿದ್ದ ಜನ ಮಕ್ಕಳು ಮರಿಗಳನ್ನು, ವಯಸ್ಸಾದ ತಂದೆ ತಾಯಂದಿರನ್ನು ಕಟ್ಟಿಕೊಂಡು ಸಾವಿರಾರು ಮೈಲಿ ನಡೆಯುತ್ತ ಊರು ಸೇರಿದ ಹಾಗೂ ದಾರಿಯಲ್ಲಿ ಬೀದಿ ಹೆಣಗಳಾಗಿ ಬಿದ್ದ ದುರಂತ ಈ ವಿಶ್ವ ಗುರುವಿನ ಕಣ್ಣಿಗೆ ಕಾಣುವುದಿಲ್ಲ ಎಂದೆನಿಸುತ್ತದೆ.
ಸಂವಿಧಾನದ ಎಲ್ಲ ಸಂಸ್ಥೆಗಳನ್ನು ಈ ಸರಕಾರ ನಿಷ್ಕ್ರಿಯಗೊಳಿಸುತ್ತಿದೆ. ನ್ಯಾಯಾಂಗವೂ ಈಗ ಭಯ ಮುಕ್ತವಾಗಿಲ್ಲ. ವಿಚಾರವಾದಿ ನರೇಂದ್ರ ದಾಭೋಲ್ಕರ್, ಕಮ್ಯುನಿಸ್ಟ್ ನಾಯಕ ಮತ್ತು ಚಿಂತಕ ಗೋವಿಂದ ಪನ್ಸಾರೆ, ಸಂಶೋಧಕರಾಗಿದ್ದ ಡಾ.ಎಂ.ಎಂ.ಕಲಬುರ್ಗಿ ಮತ್ತು ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ನಡೆದು ವರ್ಷಗಳೇ ಗತಿಸಿದರೂ ಆರೋಪಿಗಳನ್ನು ಕಟ ಕಟೆಗೆ ತಂದು ನಿಲ್ಲಿಸಲು ಇನ್ನೂ ಸಾಧ್ಯವಾಗಿಲ್ಲ.ಇದು ಪ್ರಜಾಪ್ರಭುತ್ವದ ಅವನತಿಯ ಸಂಕೇತ. ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗ 'ನಾನೂ ತಿನ್ನುವುದಿಲ್ಲ, ಇನ್ನೊಬ್ಬರಿಗೆ ತಿನ್ನಲೂ ಬಿಡುವುದಿಲ್ಲ' ಎಂದು ದೊಡ್ಡದಾಗಿ ಹೇಳಿಕೊಂಡಿದ್ದರು. ಆದರೆ ಈ ಸರಕಾರದಲ್ಲಿ ನಡೆದ ರಫೇಲ್ ಯುದ್ಧ ವಿಮಾನ ಖರೀದಿ ಹಗರಣ, ಅದನ್ನು ಮುಚ್ಚಿ ಹಾಕಲು ಸರಕಾರ ನಡೆಸಿದ ಮಸಲತ್ತು ಎಲ್ಲರಿಗೂ ಗೊತ್ತಿದೆ. ಅಷ್ಟೇ ಅಲ್ಲ, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ ಅಲ್ಲಿನ ಸರಕಾರಗಳನ್ನು ಉರುಳಿಸಲು ಇತರ ಪಕ್ಷಗಳ ಶಾಸಕರನ್ನು ಖರೀದಿಸಿ ಆಪರೇಷನ್ ಕಮಲದ ಮೂಲಕ ಚುನಾವಣೆಯಲ್ಲಿ ಗೆಲ್ಲದಿದ್ದರೂ ತನ್ನ ಸರಕಾರ ಹೇರಿದ್ದು, ರಾಜಕೀಯ ವಿರೋಧಿ ಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಸಿಬಿಐ, ಜಾರಿ ನಿರ್ದೇಶನಾಲಯ, ಮತ್ತು ಎನ್‌ಐಎ ಗಳನ್ನು ಬಳಸಿಕೊಳ್ಳುತ್ತಿರು ವುದು ಮತ್ತು ಶತಮಾನಗಳಿಂದ ಈ ದೇಶದಲ್ಲಿ ನೆಲೆಸಿದ ಮುಸಲ್ಮಾನರು ಮತ್ತು ಕ್ರೈಸ್ತರ ನಾಗರಿಕತ್ವ ಪ್ರಶ್ನಿಸಿ ಸಿಎಎ ಯಂಥ ಕರಾಳ ಕಾನೂನು ತಂದದ್ದು ಈ ಸರಕಾರದ ಏಕೈಕ ಸಾಧನೆಯೆಂದರೆ ತಪ್ಪಿಲ್ಲ.
ಸರಕಾರದ ನೀತಿ ಧೋರಣೆಗಳನ್ನು ವಿರೋಧಿಸುವ ಎಲ್ಲರನ್ನೂ ರಾಷ್ಟ್ರ ದ್ರೋಹಿಗಳೆಂದು ಕರೆದು ಜೈಲಿಗೆ ಹಾಕುವುದು, ಆನಂದ ತೇಲ್ತುಂಬ್ಡೆೆ ಅವರಂಥ ಚಿಂತಕರನ್ನು ಕರಾಳ ಕಾನೂನಿನ ಅಡಿ ಸೆರೆಮನೆಗೆ ತಳ್ಳಿರುವುದು ಈ ಸರಕಾರದ ಫ್ಯಾಶಿಸ್ಟ್ ನೀತಿಗೆ ಸಾಕ್ಷಿಯಾಗಿದೆ.
ಭಾರತದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ. ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಕಡಿಮೆಯಾಗಿದೆ. ವಿದೇಶಿ ವಿನಿಮಯ ಮೀಸಲು ಪ್ರಮಾಣ ಕುಸಿದಿದೆ. ಇಂಧನ ಮತ್ತು ಇತರ ಜೀವನಾವಶ್ಯಕ ಪದಾರ್ಥಗಳ ಬೆಲೆ ಗಗನಕ್ಕೇರಿದೆ.ನಿರುದ್ಯೋಗ ಹಿಂದೆಂದೂ ಕಂಡರಿಯದಷ್ಟು ಹೆಚ್ವಾಗಿದೆ. ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ ಲಕ್ಷಾಂತರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದಕ್ಕೆಲ್ಲ ಉತ್ತರಿಸದೇ ಅಯೋಧ್ಯೆಯ ಮಂದಿರ ತನ್ನ ಮಹತ್ಸಾಧನೆ ಎಂದು ಬಿಜೆಪಿ ಬಡಾಯಿ ಕೊಚ್ಚಿಕೊಳ್ಳುತ್ತಿದೆ.
ಒಂದೆಡೆ ಅಂಬಾನಿ, ಅದಾನಿಗಳ ಸಂಪತ್ತು ನೂರಾರು ಪಟ್ಟು ಹೆಚ್ಚಾಗಿದ್ದರೆ, ಇನ್ನೊಂದೆಡೆ ದೇಶ ಸಾಲದ ಕೂಪದಲ್ಲಿ ಬಿದ್ದಿದೆ. 2014 ರ ಅಧಿಕೃತ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರಕಾರದ ಸಾಲ ಆಗ 53.11 ಲಕ್ಷ ಕೋಟಿ ರೂ. ಇತ್ತು. ಇದು ಸ್ವಾತಂತ್ರಾ ನಂತರದ ಒಟ್ಟು ಎಪ್ಪತ್ತು ವರ್ಷಗಳ ಸಾಲ. ಈಗ ಅಂದರೆ 2022 ರ ಮಾರ್ಚ್ 31ರ ವೇಳೆಗೆ ಈ ಸಾಲದ ಪ್ರಮಾಣ 139.36 ಲಕ್ಷ ಕೋಟಿ ರೂ. ತಲುಪಿದೆ. 2023 ಮಾರ್ಚ್ ಅಂತ್ಯದ ವೇಳೆಗೆ ಇದು 155 ಲಕ್ಷ ಕೋಟಿ ರೂ. ಆಗಲಿದೆ. ವಾಸ್ತವವಾಗಿ ಭಾರತ ಇಂದು ಹಿಂದೆಂದೂ ಕಂಡರಿಯದ ಸಾಲದ ಸುಳಿಗೆ ಸಿಲುಕಿದೆ. ಹಣದುಬ್ಬರ ಮಿತಿ ಮೀರಿದೆ. ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ರಾಜ್ಯಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ.ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತಿದೆ. ನರೇಂದ್ರ ಮೋದಿಯವರ ಆರೆಸ್ಸೆಸ್ ನಿಯಂತ್ರಿತ ಸರಕಾರದಿಂದಾಗಿ ದೇಶದ ಪ್ರಜಾಪ್ರಭುತ್ವ ಮತ್ತು ಅದರ ಆಧಾರ ಸ್ತಂಭವಾದ ಸಂವಿಧಾನ ಗಳು ಅಪಾಯದಲ್ಲಿವೆ. ಜಾತ್ಯತೀತ ಭಾರತದ ಸಮಾಧಿಯ ಮೇಲೆ ಮನುವಾದಿ ಹಿಂದೂ ರಾಷ್ಟ್ರವನ್ನು ಕಟ್ಟಲು ಎಲ್ಲ ಸಿದ್ಧತೆಗಳನ್ನು ಈ ಸರಕಾರ ಮಾಡಿಕೊಂಡಿದೆ. ಈ ಅಪಾಯವನ್ನು ಭಾರತದ ಜನ ಅರ್ಥ ಮಾಡಿಕೊಂಡರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳು ಸುರಕ್ಷಿತವಾಗಿ ಉಳಿಯುತ್ತವೆ.
ಈ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಮಸೀದಿಗಳಡಿಯಲ್ಲಿ ಶಿವಲಿಂಗಗಳನ್ನು ಹುಡುಕುತ್ತ, ಯಾರು ಯಾವ ಬಟ್ಟೆ ತೊಡಬೇಕು, ಯಾರು ಯಾವ ಊಟ ಮಾಡಬೇಕು ಎಂದು ಪ್ರಜೆಗಳಿಗೆ ನಿರ್ದೇಶನ ನೀಡುತ್ತ, ಅದಕ್ಕಾಗಿ ಗೂಂಡಾ ಗ್ಯಾಂಗುಗಳನ್ನು ಪ್ರೋತ್ಸಾಹಿಸುತ್ತ ಬಂದಿದೆ. ಈ ಫ್ಯಾಶಿಸ್ಟ್ ದುರಾಡಳಿತ ಕೊನೆಯಾಗಬೇಕೆಂದರೆ ಇವರ ಕೈಯಿಂದ ರಾಜಕೀಯ ಅಧಿಕಾರ ವನ್ನು ಜನರು ಕಿತ್ತು ಕೊಳ್ಳಬೇಕು. ಸೆಕ್ಯುಲರ್ ಮತಗಳು ವಿಭಜನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಅದೊಂದೇ ಈಗ ಉಳಿದ ದಾರಿಯಾಗಿದೆ.