ಕಾರ್ಕಳ | ಪಡುಗಿರಿ ರಸ್ತೆಗೆ ಗೋಡ್ಸೆ ನಾಮಫಲಕ ಅಳವಡಿಕೆ: ಗ್ರಾಪಂ, ಪೊಲೀಸರಿಂದ ತೆರವು

Update: 2022-06-06 08:40 GMT

ಕಾರ್ಕಳ: ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಗಿರಿಗೆ ಹೋಗುವ ಪಂಚಾಯತ್ ರಸ್ತೆಗೆ ನಾಥೂರಾಮ್ ಗೋಡ್ಸೆ ನಾಮಫಲಕ ಅಳವಡಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಎಚ್ಚೆತ್ತ ಕಾರ್ಕಳ ಪೊಲೀಸರು ಧಾವಿಸಿದ್ದು, ಬೋಳ ಗ್ರಾಪಂ ಪಿಡಿಒ ಸಮ್ಮುಖದಲ್ಲಿ ನಾಮಫಲಕವನ್ನು ತೆರವುಗೊಳಿಸಲಾಯಿತು.

ಮೂರು ದಿನಗಳ ಹಿಂದೆ ಅನಾಮಧೇಯ ವ್ಯಕ್ತಿಗಳು ರಾತ್ರೋರಾತ್ರಿ ಈ ವಿವಾದಾತ್ಮಕ ನಾಮಫಲಕವನ್ನು ಅಳವಡಿಸಿದ್ದರೆನ್ನಲಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಯುವ ಕಾಂಗ್ರೆಸ್ ಕಾರ್ಯಕರ್ತರು ಬೋಳ ಪಂಚಾಯತ್ ಕಚೇರಿಗೆ ಧಾವಿಸಿ ನಾಮಫಲಕ ತೆರವುಗೊಳಿಸುವಂತೆ ಆಗ್ರಹಿಸಿದರು. ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯ ಹೆಸರನ್ನು ರಸ್ತೆಗೆ ಇಡುವ ಮೂಲಕ ದೇಶದ್ರೋಹಿಯನ್ನು ವೈಭವೀಕರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ‌ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋಳ ಪಂಚಾಯತ್ ಮೂಲಗಳು, "ಇದು ಖಾಸಗಿಯವರು ಹಾಕಿದ ನಾಮಫಲಕ. ಪಂಚಾಯತ್ ನಲ್ಲಿ ಈ ಹೆಸರಿಡುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ. ಪಂಚಾಯತ್ ಈ ನಾಮಫಲಕ ಹಾಕಿಲ್ಲ" ಎಂದು ಹೇಳಿದೆ.

 ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಶಾಸಕ, ಸಚಿವ ವಿ.ಸುನೀಲ್ ಕುಮಾರ್, “ಇದು ಪಂಚಾಯತ್ ನಿಂದ ಅಧಿಕೃತವಾಗಿ ಹಾಕಲಾದ ನಾಮಫಲಕವಲ್ಲ. ಖಾಸಗಿಯವರು ಹಾಕಿದ್ದಾರೆ. ಈ ಬಗ್ಗೆ ಪಂಚಾಯತ್ ನವರು ಪರಿಶೀಲಿಸಿ ಅಧಿಕೃತ ವಸ್ತುಸ್ಥಿತಿಯನ್ನು ಸಾರ್ವಜನಿಕರ ಮುಂದಿಡುತ್ತಾರೆ”ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News