ಎಂ.ಎಲ್.ಸಾಮಗರಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ಗೆ 50 ಸೆಂಟ್ಸ್ ಭೂದಾನ

Update: 2022-06-20 13:58 GMT

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಎಲ್.ಸಾಮಗ, ತಂದೆಯಿಂದ ತನ್ನ ಪಾಲಿಗೆ ಬಂದಿದ್ದ ೫೦ ಸೆಂಟ್ಸ್ ಭೂಮಿಯನ್ನು ಯಕ್ಷಗಾನ ಕಲಾವಿದರ ಶ್ರೇಯೋ ಭಿವೃದ್ಧಿ ಮತ್ತು ಯಕ್ಷಗಾನ ಕಲೆಯನ್ನು ಪೋಷಿಸುತ್ತಿರುವ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ಗೆ ೭೫ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವರ್ಷದ ನೆನಪಿಗಾಗಿ ದಾನವಾಗಿ ನೀಡಿದ್ದಾರೆ.

ಹಿರಿಯ ಸ್ವಾತಂತ್ರ್ಯಯೋಧ, ಯಕ್ಷಗಾನ ಕಲಾವಿದ, ಹರಿದಾಸ, ದೊಡ್ಡ ಸಾಮಗರೆಂದೇ ಪ್ರಸಿದ್ಧರಾದ ಮಲ್ಪೆ ಶಂಕರನಾರಾಯಣ ಸಾಮಗ ಅವರಿಗೆ ಯೋಧರ ನೆಲೆಯಲ್ಲಿ ಕೊಡವೂರು ಗ್ರಾಮದ ಲಕ್ಷ್ಮೀನಗರ ಬಳಿಯಲ್ಲಿ ದೊರಕಿದ ೫೦ ಸೆಂಟ್ಸ್ ಭೂಮಿಯನ್ನು ಪ್ರೊ.ಎಂ.ಎಲ್. ಸಾಮಗ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರಿಗೆ ಸೋಮ ವಾರ ನೋಂದಣಿ ಮಾಡಿಸಿ, ದಾಖಲಾತಿಯನ್ನು ಹಸ್ತಾಂತರಿಸಿದರು.

ಅಮೇರಿಕಾ ಸೇರಿದಂತೆ ವಿವಿಧ ದೇಶಗಳಲ್ಲಿ ಈವರೆಗೆ ೩೮ ಘಟಕಗಳನ್ನು ಹೊಂದಿರುವ ಟ್ರಸ್ಟ್‌ನ ಉಡುಪಿ ಘಟಕವು ಶೀಘ್ರದಲ್ಲಿಯೇ ಪ್ರಾರಂಭ ಗೊಳ್ಳಲಿದೆ. ಟ್ರಸ್ಟ್‌ಗೆ ಬಳುವಳಿಯಾಗಿ ಬಂದ ಭೂಮಿಯನ್ನು ಪಟ್ಲಾಶ್ರಯ ಯೋಜನೆಯಡಿ ಅಭಿವೃದ್ಧಿಪಡಿಸಲಾಗುವುದು. ಮಲ್ಪೆ ಶಂಕರನಾರಾಯಣ ಸಾಮಗರ ನೆನಪಿನಲ್ಲಿ ಮಲ್ಪೆ ದೊಡ್ಡ ಸಾಮಗರ ಕಲಾ ಸಮುಚ್ಛಯ ಎನ್ನುವ ಹೆಸರನ್ನಿಟ್ಟು, ಬಡ ಕಲಾವಿದರಿಗೆ ಮನೆ ಕಟ್ಟಿ ಕೊಡುವ ಮತ್ತು ಯಕ್ಷಗಾನ ಕಲಾಭಿವೃದ್ಧಿಗೆ ಪೂರಕವಾದ ಹಲವಾರು ಹೋಜನೆಗಳನ್ನು ರೂಪಿಸಲಾಗುವುದು ಎಂದು ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ಈ ಸಂದರ್ಭದಲ್ಲಿ ವಿದುಷಿ ಪ್ರತಿಭಾ ಎಲ್.ಸಾಮಗ, ದಸ್ತಾವೇಜು ಸಲಹೆಗಾರ ರತ್ನ ಕುಮಾರ್, ಕಲಾ ಸಂಘಟಕ ಸುಧಾಕರ ಆಚಾರ್ಯ ಉಡುಪಿ  ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News