ಪ್ರತ್ಯೇಕ ಪ್ರಕರಣ: ನೀರಿಗೆ ಬಿದ್ದು ಇಬ್ಬರು ಕೃಷಿಕರು ಮೃತ್ಯು
Update: 2022-08-06 15:44 GMT
ಬ್ರಹ್ಮಾವರ, ಆ.6: ಪ್ರತ್ಯೇಕ ಎರಡು ಪ್ರಕರಣದಲ್ಲಿ ಗಾಳಿ ಮಳೆ ರಭಸಕ್ಕೆ ಕೃಷಿಕರಿಬ್ಬರು ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಹಂದಾಡಿ ಗ್ರಾಮದ ಮಕ್ಕಿಮನೆ ಎಂಬಲ್ಲಿ ಆ.4ರ ಸಂಜೆಯಿಂದ ಆ.6ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಸ್ಥಳೀಯ ನಿವಾಸಿ ಬಾಬು ಪೂಜಾರಿ ಎಂಬವರು ಮಗಳ ಮನೆಗೆ ನಡೆದುಕೊಂಡು ಹೋಗುವಾಗ ಗಾಳಿಮಳೆ ರಭಸಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಸಮೀಪದ ಕೆರೆ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರ್ವತ್ತೂರು ಗ್ರಾಮದ ಪಾಲ್ದಂಟು ಎಂಬಲ್ಲಿ ಕೃಷಿಕ ಸತೀಶ್ ಬಂಗೇರ(45) ಎಂಬವರು ಆ.5ರಂದು ಬೆಳಗ್ಗೆ ಮನೆಯ ಬಳಿ ಗದ್ದೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ವಿಪರೀತ ಮಳೆಯಿಂದ ತೋಡಿನ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿ ದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.