ಉಡುಪಿ: ಸಾಮರಸ್ಯಕ್ಕೆ ಸಾಕ್ಷಿಯಾದ ಸರ್ವಧರ್ಮೀಯರ ಮಸೀದಿ ಸಂದರ್ಶನ

ಸೌಹಾರ್ದತೆ ಸಂದೇಶ ಸಾರಿದ ವಿಶಿಷ್ಟ ಕಾರ್ಯಕ್ರಮ

Update: 2023-03-04 12:33 GMT

ಉಡುಪಿ : ಧರ್ಮಗಳ ನಡುವಿನ ಅಪನಂಬಿಕೆ, ಸಂಶಯಗಳು ದೂರ ಮಾಡಿ ಸೌಹಾರ್ದ ಸಮಾಜ ಕಟ್ಟುವ ನಿಟ್ಟಿನಲ್ಲಿ ಇಂದು ಉಡುಪಿ ಜಾಮೀಯ ಮಸೀದಿಯಲ್ಲಿ ಹಮ್ಮಿಕೊಳ್ಳಲಾದ ಮಸೀದಿ ಸಂದರ್ಶನ ಕಾರ್ಯಕ್ರಮದಲ್ಲಿ ವಿವಿಧ ಧರ್ಮೀಯರು ಭಾಗಿಯಾಗಿ ಸಾಮರಸ್ಯಕ್ಕೆ ಸಾಕ್ಷಿಯಾದರು.

ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಮತ್ತು ಮಸೀದಿ ದರ್ಶನ ಸ್ವಾಗತ ಸಮಿತಿ ವತಿಯಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಏರ್ಪಡಿಸಲಾದ ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಸರ್ವಧರ್ಮೀಯ ಮಹಿಳೆಯರು, ಮಕ್ಕಳು, ವೃದ್ಧರು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು, ಉಪನ್ಯಾಸಕರು, ಪತ್ರಕರ್ತರು ಆಗಮಿಸಿ ಮಸೀದಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಅರಿತು ಕೊಂಡರು.

ಮಸೀದಿ ಅಂದರೆ ಏನು, ಓಝು ಮಾಡುವ ವಿಧಾನ, ಆಝಾನ್‌ನ ಅರ್ಥ, ಮಸೀದಿ ಒಳಗಿನ ಮಿಂಬರ್, ಮೆಹ್ರಾಬ್, ಕುರ್‌ಆನ್, ನಮಾಝ್ ಮಾಡುವ ವಿಧಾನ, ಮಹಿಳೆಯರಿಗೆ ಮಸೀದಿಯಲ್ಲಿನ ವ್ಯವಸ್ಥೆ, ಶುಕ್ರವಾರದ ನಮಾಝ್‌ನ ಪ್ರಾಮುಖ್ಯತೆಗಳ ಬಗ್ಗೆ ತಿಳಿಸಲಾಯಿತು. ಕೆಲವರು ತಮ್ಮ ಸಂಶಯ, ಗೊಂದಲ ಗಳನ್ನು ಕೇಳಿ ನಿವಾರಿಸಿಕೊಂಡರು. ಮದ್ರಸದ ಕಲಿಕೆ, ಪಠ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

ಕಟಪಾಡಿಯ 70ರ ಹರೆಯದ ಸುಶೀಲಾ ಎಂಬವರು ಮಸೀದಿಗೆ ಆಗಮಿಸಿ ಮಸೀದಿಯ ಚಟುವಟಿಕೆಗಳನ್ನು ತಿಳಿದುಕೊಂಡಿರುವುದು ವಿಶೇಷವಾಗಿತ್ತು. ಮುಸ್ಲಿಮರ ಸಂಸ್ಕೃತಿಯ ಭಾಗವಾದ ಮೆಹೆಂದಿ, ಕ್ಯಾಲಿಗ್ರಫಿ ಕೌಂಟರ್‌ಗಳನ್ನು ಕೂಡ ತೆರೆಯಲಾಗಿತ್ತು. ಇಲ್ಲಿ ಹಲವು ಮಂದಿ ತಮ್ಮ ಕೈಗಳಿಗೆ ಮೆಹಂದಿ ಹಚ್ಚಿಸಿ ಕೊಂಡರು ಮತ್ತು ತಮ್ಮ ಹೆಸರನ್ನು ಅರಬಿ ಭಾಷೆಯಲ್ಲಿ ಕ್ಯಾಲಿಗ್ರಫಿ ಮೂಲಕ ಬರೆಸಿಕೊಂಡರು.

ʼಸೌಹಾರ್ದತೆಗಾಗಿ ಒಟ್ಟಾಗಿ ಹೆಜ್ಜೆʼ

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮನೋ ವೈದ್ಯ ಡಾ.ಪಿ.ವಿ.ಭಂಡಾರಿ, ದೇಶದ ಜಾತ್ಯಾತೀತ ಆಶಯವನ್ನು ಈಡೇರಿಸ ಬೇಕೆಂಬ ಭಾವನೆ ಜನಸಾಮಾನ್ಯರದ್ದಾಗಿದೆ. ಆದರೆ ಜನಸಾಮಾನ್ಯರ ಭಾವನೆಗೆ ಧಕ್ಕೆ ತರುವ ಮತ್ತು ರಾಜಕೀಯ ಕಾರಣಕ್ಕೆ ಈ ಆಶಯವನ್ನು ಹಾಳು ಮಾಡುವ ಪ್ರಯತ್ನ ನಡೆಯುತ್ತಿದೆ. ಹಾಜಿ ಅಬ್ದುಲ್ಲಾರ ಉಡುಪಿಯಲ್ಲಿ ಕೋಮು ಸೌಹಾರ್ದತೆಗಾಗಿ ನಾವೆಲ್ಲ ಒಟ್ಟಾಗಿ ಹೆಜ್ಜೆ ಇಡಬೇಕು ಎಂದರು.

ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲದಾಸ್ ಬನ್ನಂಜೆ ಮಾತನಾಡಿ, ನಮ್ಮ ದೇಶದಲ್ಲಿನ ವಿವಿಧತೆಯೊಳಗಿನ ಏಕತೆಯನ್ನು ಮುಂದುವರೆಸಿಕೊಂಡು ಸಹೋದರತ್ವದ ಭಾವನೆಯೊಂದಿಗೆ ಸಾಮರಸ್ಯದ ಬದುಕು ನಡೆಸಬೇಕು. ಎಲ್ಲ ಧರ್ಮದಲ್ಲಿನ ಉತ್ತಮ ಸಂದೇಶವನ್ನು ಮುಂದಿನ ಜನಾಂಗಕ್ಕೆ ಕೊಡುವ ಕಾರ್ಯ ಮಾಡಬೇಕು. ಧ್ವೇಷ ಪ್ರೇಮ ಬಿಟ್ಟು ನಾವೆಲ್ಲ ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.  

ಸಮಿತಿ ಸದಸ್ಯ ಇದ್ರೀಸ್ ಹೂಡೆ ಮಾತನಾಡಿ, ಮಸೀದಿ ಕೇವಲ ಪ್ರಾರ್ಥನೆ ಸೀಮಿತವಾಗಿಲ್ಲ. ಇದು ಎಲ್ಲರೊಂದಿಗೆ ತೆರೆದುಕೊಳ್ಳುವ ಕೇಂದ್ರವಾಗಿದೆ. ಇಸ್ಲಾಮ್ ಭಾರತದಲ್ಲಿ 1400 ವರ್ಷಗಳಿಂದ ಇಲ್ಲಿನ ಜನಜೀವನ ಭಾಗವಾಗಿರುವುದರಿಂದ ಆಝಾನ್, ನಮಾಝ್, ಉಪವಾಸ ವೃತ ಹಾಗೂ ಇತರ ನಂಬಿಕೆಗಳು ಕೂಡ ಭಾರತೀಯ ಬಹುಸಂಸ್ಕೃತಿಯ ಭಾಗವಾಗಿದೆ ಎಂದು ಹೇಳಿದರು.

ಹಿರಿಯ ಚಿಂತಕ ಪ್ರೊ.ಫಣಿರಾಜ್, ಉಡುಪಿ ಜಂಗಮ ಮಠದ ಯು.ಸಿ. ನಿರಂಜನ್, ಜಮಾಅತೆ ಇಸ್ಲಾಮೀ ಹಿಂದ್‌ನ ಅಬ್ದುಸ್ಸಲಾಂ ಉಪ್ಪಿನಂಗಡಿ, ಸಮಿತಿ ಉಪಾಧ್ಯಕ್ಷರಾದ ಯು.ಎಸ್.ವಾಹಿದ್, ವಿ.ಎಸ್.ಉಮರ್, ನಗರಸಭೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾಪಂ ಮಾಜಿ ಅಧ್ಯಕ್ಷೆ ವರೋನಿಕಾ ಕರ್ನೆಲಿಯೋ, ಮಸೀದಿ ಅಧ್ಯಕ್ಷ ಅರ್ಷದ್ ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

‘ನಾನು ಈವರೆಗೆ ಮಸೀದಿಯ ಒಳಗೆ ಹೋಗಿಲ್ಲ. ಮೊದಲ ಬಾರಿಗೆ ಬಂದಿದ್ದೇನೆ. ಇಲ್ಲಿನ ಶಿಸ್ತು, ಶುಚಿತ್ವ ನೋಡಿ ತುಂಬಾ ಖುಷಿಯಾಯಿತು. ಮುಂದೆ ಎಲ್ಲ ಕಡೆಗಳಲ್ಲಿ ಇಂತಹ ಕಾರ್ಯಕ್ರಮಗಳು ನಡೆಯಬೇಕು. ಮಕ್ಕಳಿಗೆ ಇದನ್ನು ಹೇಳಿ ಕೊಟ್ಟರೆ ಇನ್ನೂ ಒಳ್ಳೆಯದು’

-ಶೋಭಾ ಕುಮಾರಿ ಪಿ. ಉಡುಪಿ

‘ಮಸೀದಿ ಏನು ಎಂಬುದೇ ಗೊತ್ತಿರಲಿಲ್ಲ. ಇವತ್ತು ನನಗೆ ಪ್ರತ್ಯಕ್ಷ ದರ್ಶನ ಮಾಡಿಸಿದರು. ತುಂಬಾ ಸಂತೋಷವಾಗಿದೆ. ನಾವೆಲ್ಲರು ಒಂದೇ ಮತದವರು ಎಂಬ ಸಮಾನತೆಯ ಭಾವ ಈ ಭೇಟಿಯಿಂದ ದೊರೆಯಿತು. ನಾವು ಮಕ್ಕಳನ್ನು ಶಾಲಾ ಪ್ರವಾಸಕ್ಕೆ ಕರೆದುಕೊಂಡು ದೇವಸ್ಥಾನ ಚರ್ಚ್‌ಗಳಿಗೆ ಹೋಗಿದ್ದೇವೆ. ಆದರೆ ಮಸೀದಿಯ ಒಳಗೆ ಹೋಗಲು ಅವಕಾಶ ಸಿಕ್ಕಿರಲಿಲ್ಲ. ಇವತ್ತು ಆ ಅವಕಾಶ ಸಿಕ್ಕಿದೆ’

-ಅಚ್ಚುತ್ತ ನಾರಾಯಣಿ, ನಿವೃತ್ತ ಶಿಕ್ಷಕಿ

‘ಮಸೀದಿ ನೋಡಬೇಕೆಂಬ ಆಸೆ ಮೊದಲಿನಿಂದಲೂ ಮನಸ್ಸಿನಲ್ಲಿ ಇತ್ತು. ಇದೀಗ ಆ ಅವಕಾಶ ಬಂದು ಒದಗಿದೆ. ಸಂಘಟಕರು ಉತ್ತಮ ಕಾರ್ಯಕ್ರಮ ಆಯೋಜಿಸಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿ ಬದುಕಬೇಕು. ಎಲ್ಲರಿಗೂ ಎಲ್ಲ ಧರ್ಮಗಳ ಪರಿಚಯ ಆಗಬೇಕು. ಇಂತಹ ಕಾರ್ಯಕ್ರಮ ಆಗಾಗ ನಡೆಯುತ್ತಿರ ಬೇಕು. ಇದರಿಂದ ನಮ್ಮ ನಡುವಿನ ಗೋಡೆಗಳನ್ನು ಕೆಡವಿ ಐಕ್ಯತೆಯಿಂದ ಬದುಕು ನಡೆಸಬಹುದು’

-ಗಂಗಾಧರ ಹೆಗ್ಡೆ, ಸಂಯೋಜಕರು, ಹೆಲ್ಪ್ ಡೆಸ್ಕ್, ಉಡುಪಿ

‘ಮಸೀದಿಗೆ ಬಂದ ಬಹುತೇಕ ಮಹಿಳೆಯರು ತಮ್ಮಲ್ಲಿದ್ದ ಸಂಶಯಗಳನ್ನು ಕೇಳಿ ನಿವಾರಿಸಿಕೊಂಡರು. ಮಸೀದಿಯಲ್ಲಿ ಶುದ್ಧತೆ ಆದ್ಯತೆ ನೀಡುವ ಬಗ್ಗೆ ಹಾಗೂ ಸಮಾನತೆ ಬಗ್ಗೆ ತಿಳಿದುಕೊಂಡರು. ಕೆಲವರು ಮೆಹಂದಿ ಹಾಕಿಸಿಕೊಂಡು ಕ್ಯಾಲಿಗ್ರಫಿ ಬರೆಸಿಕೊಂಡು ಖುಷಿಯಲ್ಲಿ ಹೋದರು’

-ಸುರಯ್ಯ, ಸ್ವಯಂ ಸೇವಕರು

‘ಮಸೀದಿ ಒಳಗೆ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದು ಎಲ್ಲ ಕಡೆಗಳಲ್ಲಿ ಅಪಪ್ರಚಾರ ಮಾಡಲಾಗುತ್ತದೆ. ಬಹುತೇಕ ಮಂದಿಗೆ ಗ್ರೌಂಡ್ ರಿಯಲಿಟಿ ಗೊತ್ತಿರಲಿಲ್ಲ. ಅದನ್ನು ತಿಳಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂತಹ ಕಾರ್ಯಕ್ರಮಗಳು ಎಲ್ಲ ಮಸೀದಿಯವರು ಕೂಡ ಹಮ್ಮಿಕೊಳ್ಳಬೇಕು’

-ಇಕ್ಬಾಲ್ ಮನ್ನಾ, ಕಾರ್ಯಕ್ರಮ ಸಂಘಟಕರು

‘ಮಸೀದಿ ಒಳಗೆ ಬರುವ ಪುಣ್ಯ ನನಗೆ ಇವತ್ತು ಸಿಕ್ಕಿದೆ. ಮುಸ್ಲಿಮ್ ಬಾಂಧವರು ಶುಕ್ರವಾರದ ನಮಾಝ್‌ಗೆ ಮಸೀದಿಗೆ ಹೋಗುವಾಗ ನನಗೆ ಮಸೀದಿ ಒಳಗೆ ಏನಿದೆ ಎಂಬ ಕೌತುಕ ಇತ್ತು. ಇಂದು ಆ ಕೌತುಕ ನಿವಾರಣೆ ಆಗಿದೆ. ಇಲ್ಲಿ ದೇವರ ಹೆಸರಿನಲ್ಲಿ ಎಲ್ಲ ಸೇರಿ ಸಮಾನತೆಯನ್ನು ಬೋಧಿಸಿ ಸಮಾಜದ ಪುನರ್ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಮುಂದೆ ನಡೆಯುವ ಇಫ್ತಾರ್ ಕೂಟಕ್ಕೂ ನಾನು ಇಲ್ಲಿಗೆ ಬರುತ್ತೇನೆ ಮತ್ತು ಮುಂದಿನ ರಮಝಾನ್ ಹಬ್ಬವನ್ನು ಹಿಂದೂ ಆಗಿ ಆಚರಿಸುತ್ತೇನೆ’
-ಯು.ಸಿ.ನಿರಂಜನ್, ಜಂಗಮ ಮಠ, ಉಡುಪಿ

Similar News