ಸಂಸದ ಬೃಜ್ ಭೂಷಣ್ ಸಿಂಗ್‌ ರನ್ನು ತಕ್ಷಣ ಬಂಧಿಸಿ: ಗೀತಾ ವಾಗ್ಳೆ ಆಗ್ರಹ

Update: 2023-06-03 10:09 GMT

ಉಡುಪಿ, ಜೂ.3: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜ್ ಭೂಷಣ್ ಶರಣ್ ಸಿಂಗ್ ಅವರನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಒತ್ತಾಯಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬೃಜ್ ಭೂಷಣ್ ಸಿಂಗ್ ತಕ್ಷಣ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ, ಬೃಜ್ ಭೂಷಣ್‌ಗೆ ಯಾವುದೇ ರೀತಿಯ ರಕ್ಷಣೆಯನ್ನು ನೀಡಬಾರದು. ದೇಶದ ಹೆಮ್ಮೆಯ ಕುಸ್ತಿಪಟುಗಳ ಹೋರಾಟಕ್ಕೆ ಮಹಿಳಾ ಕಾಂಗ್ರೆಸ್ ಬೆಂಬಲವಾಗಿ ನಿಂತು ಸರಕಾರದ ಮುಂದೆ ಈ ಬೇಡಿಕೆಗಳನ್ನು ಇಟ್ಟಿದ್ದೇವೆ ಎಂದರು.

ಅಪರಾಧ ಮಾಡಿದವರು ಯಾವುದೇ ಭಯ ಇಲ್ಲದೆ ತಿರುಗುತ್ತಿರುವುದು, ಯಾವುದೇ ಅಪರಾಧ ಮಾಡದವರು ಕುಸ್ತಿ ಪಟುಗಳ ಮೇಲೆ ದೌರ್ಜನ್ಯ ನಡೆಸಿ ಬಂಧಿಸ ಹೊರಟಿರುವ ಕೇಂದ್ರ ಸರಕಾರದ ನೀತಿ ಖಂಡನೀಯ. ಸರಕಾರ ಹಾಗೂ ಪ್ರಧಾನಿ ಕೇವಲ ಒಬ್ಬ ಸಂಸದನಿಗೆ ತಲೆಬಾಗುವಷ್ಟು ದುರ್ಬಲರೇ? ಎಂದು ಅವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷೆ ಗೋಪಿ ನಾಯ್ಕ್, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಮಾಧವ ಬನ್ನಂಜೆ, ಮುಖಂಡರಾದ ರೋಶನಿ ಒಲಿವೇರಾ, ಸುಕನ್ಯಾ ಪೂಜಾರಿ, ಪ್ರಮೀಳಾ ಸುವರ್ಣ, ಲಕ್ಷ್ಮೀ ನಾಯ್ಕ್ ಉಪಸ್ಥಿತರಿದ್ದರು.

Similar News