‘ಬೆಳಗಾವಿ ಅಧಿವೇಶನ’ : ಚರ್ಚೆಗೆ ಗ್ರಾಸವಾದ ನಗದು ಬಹುಮಾನ ಘೋಷಣೆ
ಬೆಂಗಳೂರು : ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಡಿ.9ರಿಂದ 19ರ ವರೆಗೆ ನಡೆದ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿದ ಬೆಳಗಾವಿ ನಗರ ಸೆನ್ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್‌ಗೆ 10ಸಾವಿರ ರೂ.ನಗದು ಬಹುಮಾನ ಘೋಷಣೆ ಇದೀಗ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ರವಿವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಅವರ ಸೂಚನೆ ಮೇರೆಗೆ ಆರಕ್ಷಕ ಮಹಾನಿರ್ದೇಶಕ ಹಿತೇಂದ್ರ ಆರ್. ಅವರು ಆದೇಶ ಹೊರಡಿಸಿದ್ದು, ‘ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿ ಬೀಸಿ ರಕ್ತ ಬರುವಂತೆ ಥಳಿಸಿದ್ದಕ್ಕೆ ಬಹುಮಾನ ಘೋಷಿಸಲಾಗಿದೆಯೇ?’ ಎಂದು ಜೆಡಿಎಸ್ ಎಕ್ಸ್‌ನಲ್ಲಿ ಆಕ್ರೋಶ ವ್ಯಕ್ತಡಿಸಿದೆ.
ಬಹುಮಾನ ಏಕೆ? :
‘ಕಾಂಗ್ರೆಸ್ ಸರಕಾರಕ್ಕೆ ನಾಚಿಕೆಯಾಗಬೇಕು. ಬೆಳಗಾವಿಯ ಸುವರ್ಣಸೌಧದೊಳಕ್ಕೆ ಗೂಂಡಾಗಳನ್ನು ಬಿಟ್ಟಿದ್ದಕ್ಕೆ ಪೊಲೀಸರಿಗೆ ಬಹುಮಾನ ಘೋಷಿಸಿದ್ದೀರಾ?. ಸುವರ್ಣಸೌಧದ ಬಳಿಯೇ ಜನಪ್ರತಿನಿಧಿಗೆ ರಕ್ಷಣೆ ನೀಡದ ಆರಕ್ಷಕರಿಗೆ ಬಹುಮಾನವೇ?. ಅಧಿವೇಶನದ ವೇಳೆಯೇ ಓರ್ವ ಪರಿಷತ್ ಸದಸ್ಯರನ್ನು ಕೊಲ್ಲಲು ಸುವರ್ಣಸೌಧಕ್ಕೆ ಕೊತ್ವಾಲ್ ಶಿಷ್ಯನ ಪಟಾಲಂ ಪ್ರವೇಶಕ್ಕೆ ಅವಕಾಶ ನೀಡಿದ್ದಕ್ಕೆ ಪೊಲೀಸರಿಗೆ ಬಹುಮಾನ ನೀಡಿದಿರಾ?’ ಎಂದು ಜೆಡಿಎಸ್ ಎಕ್ಸ್‌ನಲ್ಲಿ ಪ್ರಶ್ನಿಸಿದೆ.
ರವಿವಾರ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಹಾಕಿರುವ ಜೆಡಿಎಸ್, ‘ಸುವರ್ಣಸೌಧದಲ್ಲಿ ಪರಿಷತ್ ಸದಸ್ಯರನ್ನು ಕಾನೂನು ಬಾಹಿರವಾಗಿ ಬಂಧಿಸಿ, ಎಳೆದೊಯ್ದಿದ್ದಕ್ಕೆ ಪೊಲೀಸರಿಗೆ ಬಹುಮಾನ ಕೊಟ್ಟಿರಾ?. ಮೀಸಲಾತಿ ಕೇಳಿದಕ್ಕೆ ಲಾಠಿ ಚಾರ್ಚ್ ಮಾಡಿಸಿ ಪಂಚಮಸಾಲಿಗಳಿಗೆ ರಕ್ತ ಬರುವಂತೆ ಹೊಡೆದಿದ್ದಕ್ಕಾಗಿ ಪೊಲೀಸರಿಗೆ ಬಹುಮಾನವೇ?’ ಎಂದು ಕೇಳಿದೆ.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್ ಅವರ ಕೈಗೊಂಬೆಯಂತೆ ವರ್ತಿಸುತ್ತಿರುವ ಪೊಲೀಸರಿಗೆ ಬಹುಮಾನವೇ?. ಸಿದ್ದರಾಮಯ್ಯ ಸರಕಾರ ಮಾಡುತ್ತಿರುವ ಪಾಪದ ಕೆಲಸಗಳನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಪಂಚಮಸಾಲಿಗಳ ಮೇಲೆ ಲಾಠಿ ಪ್ರಹಾರ ಮಾಡಿದ ಪೊಲೀಸರಿಗೆ ಬಹುಮಾನವಾಗಿ 10ಸಾವಿರ ರೂ. ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ. ಬೆಳಗಾವಿಯ ಸುವರ್ಣಸೌಧದ ಬಳಿ ಮೀಸಲಾತಿಗಾಗಿ ನಡೆಯುತ್ತಿದ್ದ ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ ಸರಕಾರ ಲಾಠಿಚಾರ್ಚ್ ಮಾಡಿಸಿ, ಸರ್ವಾಧಿಕಾರಿಯಂತೆ ವರ್ತಿಸಿತ್ತು’ ಎಂದು ಜೆಡಿಎಸ್ ದೂರಿದೆ.
‘ಪಂಚಮಸಾಲಿ ಹೋರಾಟಗಾರರನ್ನು ಅಟ್ಟಾಡಿಸಿ ಹೊಡೆದು ರಕ್ತ ಹರಿಸಿದ್ದ ಪೊಲೀಸರಿಗೆ ಬಹುಮಾನ ಘೋಷಿಸಿದೆ ಸಿದ್ದರಾಮಯ್ಯರ ಹಿಟ್ಲರ್ ಸರಕಾರ. ಪ್ರತಿಭಟನಾಕಾರರ ಮೇಲೆ ಭರ್ಜರಿಯಾಗಿ ಲಾಠಿ ಬೀಸಿದ್ದಕ್ಕೆ ಬೆಳಗಾವಿ ನಗರದ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್‌ಗೆ ಉತ್ತಮ ಕರ್ತವ್ಯ ನಿರ್ವಹಣೆ ಹೆಸರಲ್ಲಿ 10ಸಾವಿರ ರೂ.ಬಹುಮಾನ ನೀಡಲಾಗಿದೆ ಎಂದು ಜೆಡಿಎಸ್ ಹೇಳಿದೆ.
‘ಆಕಸ್ಮಿಕ ಗೃಹಮಂತ್ರಿ ಡಾ.ಜಿ.ಪರಮೇಶ್ವರ್ ಅವರೇ ಪಂಚಮಸಾಲಿಗಳ ಮೇಲೆ ಅಮಾನುಷವಾಗಿ ಲಾಠಿ ಚಾರ್ಚ್ ಮಾಡಿಸಿದಿರಿ. ಜತೆಗೆ ಕಾಂಗ್ರೆಸ್ ಬೆಂಬಲಿತ ಗೂಂಡಾಗಳು ಸುವರ್ಣಸೌಧದೊಳಕ್ಕೆ ನುಗ್ಗಿ ಓರ್ವ ಪರಿಷತ್ ಸದಸ್ಯನ ಕೊಲೆಗೆ ಯತ್ನಿಸಿದ್ದಾರೆ. ಇದು ನಿಮ್ಮ ಸರಕಾರದ ಪ್ರಾಯೋಜಿತ ಕಾರ್ಯಕ್ರಮವೋ? ಅಥವಾ ನಿಮ್ಮ ಇಲಾಖೆಯ ಪೊಲೀಸರ ಭದ್ರತಾ ವೈಫಲ್ಯವೋ?. ಯಾರನ್ನು ಮೆಚ್ವಿಸಲು, ಖುಷಿಪಡಿಸಲು ಪೊಲೀಸರಿಗೆ ಬಹುಮಾನ?’ ಎಂದು ಜೆಡಿಎಸ್ ಖಾರವಾಗಿ ಪ್ರಶ್ನಿಸಿದೆ.