ದೇಶವನ್ನು ಸಮಗ್ರವಾಗಿ, ದಕ್ಷತೆಯಿಂದ ಕಟ್ಟುವ ಹೊಣೆಗಾರಿಕೆ ಸಾಂವಿಧಾನಿಕ ಸಂಸ್ಥೆಗಳದ್ದು : ನ್ಯಾ.ಪಿ.ಎಸ್.ನರಸಿಂಹ

Update: 2024-12-22 14:52 GMT

ಬೆಂಗಳೂರು : ದೇಶವನ್ನು ಸಮಗ್ರವಾಗಿ, ದಕ್ಷತೆಯಿಂದ ಕಟ್ಟುವ ಹೊಣೆಗಾರಿಕೆ ಸಾಂವಿಧಾನಿಕ ಸಂಸ್ಥೆಗಳದ್ದಾಗಿದೆ ಎಂದು ಸುಪ್ರೀಂ ಕೋರ್ಟ್‍ನ ಹಿರಿಯ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ತಿಳಿಸಿದರು.

ರವಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ’(ಎನ್‍ಎಲ್‍ಎಸ್‍ಐಯು) ನ್ಯಾಯಮೂರ್ತಿ ಇ.ಎಸ್.ವೆಂಕಟರಾಮಯ್ಯ ಶತಮಾನೋತ್ಸವದ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ದತ್ತಿ ಉಪನ್ಯಾಸ ‘ಸಾಂವಿಧಾನಿಕ ಸಂಸ್ಥೆಗಳನ್ನು ಮರು ರೂಪಿಸುವುದು-ಸಮಗ್ರತೆ, ದಕ್ಷತೆ ಮತ್ತು ಹೊಣೆಗಾರಿಕೆ’ ಕುರಿತು ಅವರು ಮಾತನಾಡಿದರು.

‘ಸಂಸತ್ತು, ಕಾರ್ಯಾಂಗ, ಚುನಾವಣಾ ಆಯೋಗ, ಸಿಎಜಿ ಸಹಿತ ಎಲ್ಲ ಸಾಂವಿಧಾನಿಕ ಸಂಸ್ಥೆಗಳು ಸಂವಿಧಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಿದರೆ ಅದಕ್ಕಿಂತ ಪರಿಣಾಮಕಾರಿಯಾದುದು ಇನ್ನೊಂದಿಲ್ಲ. ಈ ಸಂಸ್ಥೆಗಳು ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳಬೇಕಿದೆ. ಏಕವ್ಯಕ್ತಿ ನಿರ್ಧಾರ ಕೈಗೊಳ್ಳುವ ಬದಲು ಸಾಮೂಹಿಕ ನಿರ್ಧಾರಗಳಾಗಬೇಕು. ವಿವೇಚನೆ ಹೊಣೆಗಾರಿಕೆಯಾಗಬೇಕು. ಗೋಪ್ಯ ಬದಲು ಪಾರದರ್ಶಕವಾಗಬೇಕು. ಅಧಿಕಾರವು ಜವಾಬ್ದಾರಿಯಾಗಿ ಬದಲಾಗಬೇಕು ಎಂದು ಅವರು ಸಲಹೆ ನೀಡಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮಾತನಾಡಿ, ಎಂಗಳಗುಪ್ಪೆ ಸೀತಾರಾಮಯ್ಯ ವೆಂಕಟರಾಮಯ್ಯ ಅವರು ಮೈಸೂರಿನಲ್ಲಿ ಪದವಿ ಮುಗಿಸಿ, ಬೆಳಗಾವಿಯಲ್ಲಿ ಎಲ್‍ಎಲ್‍ಬಿ ಮಾಡಿದ್ದರು. ಹೈಕೋರ್ಟ್ ವಕೀಲರಾಗಿ, ಆನಂತರ ವಿಶೇಷ ಸರಕಾರಿ ಪ್ಲೀಡರ್ ಆಗಿ, ಮೈಸೂರಿನ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು. ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ, ಖಾಯಂ ನ್ಯಾಯಮೂರ್ತಿಗಳಾಗಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ, ಮುಖ್ಯನ್ಯಾಯಮೂರ್ತಿಯಾಗಿ ಕೆಲಸ ಮಾಡಿ 1989ರಲ್ಲಿ ನಿವೃತ್ತರಾದರು. ಬಳಿಕ ಎನ್‍ಎಲ್‍ಎಸ್‍ಐಯುನಲ್ಲಿ ಕಾನೂನು ಪಾಠ ಮಾಡಿದ್ದರು ಎಂದು ತಿಳಿಸಿದರು.

ವೆಂಕಟರಾಮಯ್ಯ ಅವರು ಸುಪ್ರೀಂಕೋರ್ಟ್‍ನಲ್ಲಿ 720 ತೀರ್ಪುಗಳನ್ನು ಪ್ರಕಟಿಸಿದ ಪೀಠಗಳ ಭಾಗವಾಗಿದ್ದರು. ಅವುಗಳಲ್ಲಿ ಅವರ ಅವಧಿಯಲ್ಲೇ 256 ತೀರ್ಪುಗಳನ್ನು ಬರೆದಿದ್ದರು ಎಂದು ಇ.ಎಸ್.ವೆಂಕಟರಾಮಯ್ಯರ ಪುತ್ರಿ ಆಗಿರುವ ಬಿ.ವಿ.ನಾಗರತ್ನ ಮಾಹಿತಿ ನೀಡಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮುಕುಲ್ ಮುದ್ಗಲ್, ಎನ್‍ಎಲ್‍ಎಸ್‍ಐಯು ಕುಲಪತಿ ಸುಧೀರ್ ಕೃಷ್ಣಸ್ವಾಮಿ, ಕುಲಸಚಿವ ನಿಗಮ್ ನುಗ್ಗೇಹಳ್ಳಿ, ಸಿಎಂ ಕಾನೂನು ಸಲಹೆಗಾರ, ಶಾಸಕ ಎ.ಎಸ್.ಪೊನ್ನಣ್ಣ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News