ಮಧುಕರ ಶೆಟ್ಟಿ ಆದರ್ಶ ಮೌಲ್ಯಗಳ ಅಧಿಕಾರಿಯಾಗಿದ್ದರು: ಡಾ.ಜಿ. ರಾಮಕೃಷ್ಣ
ಬೆಂಗಳೂರು: ಐಪಿಎಸ್ ಅಧಿಕಾರಿ ಡಾ.ಕೆ.ಮಧುಕರ ಶೆಟ್ಟಿ ಆದರ್ಶ ಮೌಲ್ಯಗಳ ಅಧಿಕಾರಿಯಾಗಿದ್ದರು ಎಂದು ಶಿಕ್ಷಣ ತಜ್ಞ, ವೈಚಾರಿಕ ಚಿಂತಕ ಸಾಹಿತಿ ಡಾ.ಜಿ.ರಾಮಕೃಷ್ಣ ಸ್ಮರಿಸಿದ್ದಾರೆ.
ಶನಿವಾರ ನಗರದ ಎಚ್ಎಸ್ಆರ್ ಲೇಔಟ್ ನ ಸಮರ್ಥನಂ ಟ್ರಸ್ಟ್ ಸಭಾಂಗಣದಲ್ಲಿ ಐಪಿಎಸ್ ಅಧಿಕಾರಿ ಡಾ.ಕೆ.ಮಧುಕರ ಶೆಟ್ಟಿ 53ನೇ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳ ಬಳಗ ಹಮ್ಮಿಕೊಂಡಿದ್ದ ಪುಷ್ಪ ನಮನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನನ್ನ ಆತ್ಮೀಯರ ಪೈಕಿ ಮಧುಕರ ಶೆಟ್ಟಿ ತೀರ ಹತ್ತಿರದವರು. ಅಷ್ಟೇ ಮಾತ್ರವಲ್ಲದೆ, ಭಿನ್ನವಾದ, ವಿಶ್ಲೇಷಣೆ ಚಿಂತನೆಯುಳ್ಳ ವ್ಯಕ್ತಿ ಯಾರಾದರೂ ಇದ್ದರೆ, ಈ ಪೈಕಿ ದಿವಂಗತ ಐಪಿಎಸ್ ಅಧಿಕಾರಿ ಡಾ.ಕೆ.ಮಧುಕರ ಶೆಟ್ಟಿ ಮೊದಲಿಗರು ಎಂದು ಅವರು ನುಡಿದರು.
ಬಿಎಂಟಿಸಿ ಭದ್ರತೆ ಮತ್ತು ವಿಜಿಲೆನ್ಸ್ ನಿರ್ದೇಶಕ ಅಬ್ದುಲ್ ಅಹದ್ ಮಾತನಾಡಿ, ‘ಇತ್ತೀಚೆಗೆ ಸರಕಾರಿ ಅಧಿಕಾರಿಗಳನ್ನು ದಕ್ಷ, ಪ್ರಾಮಾಣಿಕ ಎಂದು ಬಣ್ಣಿಸಲಾಗುತ್ತಿದೆ. ಆದರೆ, ಜನರ ತೆರಿಗೆಯಿಂದ ಕೆಲಸ ಮಾಡುವ ಪ್ರತಿಯೊಬ್ಬರು ದಕ್ಷ, ಪ್ರಾಮಾಣಿಕ ಇರಲೇಬೇಕು ಅಲ್ಲವೇ. ಇದು ಸಾಮಾನ್ಯ ಕರ್ತವ್ಯ ಅಲ್ಲವೇ?’ ಎಂದು ಪ್ರಶ್ನೆ ಮಾಡಿದರು.
ಸರಕಾರಿ ಅಧಿಕಾರಿ, ಜನಪ್ರತಿನಿಧಿಗಳ ಬಳಿ ದಕ್ಷ, ಪ್ರಾಮಾಣಿಕತೆಗಿಂತ ಹೆಚ್ಚು ವಿನಯವಂತಿಕೆ ಇರಬೇಕು. ಇದು ಮಾತ್ರ ನಮ್ಮ ಮೌಲ್ಯಗಳನ್ನು ಜೀವಂತವಾಗಿ ಇರಿಸುವಂತೆ ಮಾಡುತ್ತದೆ. ಇಂತಹ ನಿಷ್ಠೆ ಮಧುಕರ ಶೆಟ್ಟಿ ಅವರಲ್ಲಿ ಇತ್ತು ಎಂದು ಅಬ್ದುಲ್ ಅಹದ್ ನುಡಿದರು.
ಮಧುಕರ ಶೆಟ್ಟಿ ಓರ್ವ ಸೇನಾನಿ. ಅಂತಹ ಒಂದು ಚಿಂತನೆ ಈ ಸಮಾಜಕ್ಕೆ ಬೇಕಾಗಿದೆ. ಒಡೆದು ತಿನ್ನುವ, ಮೋಸ ಮಾಡುವ, ವಂಚನೆ ಎಸಗುವ, ಜಾತಿ ರಾಜಕಾರಣ, ಧರ್ಮ ರಾಜಕಾರಣ ಹೀಗೆ ಕಲ್ಮಶವೇ ತುಂಬಿರುವ ಈ ಸಮಾಜದಲ್ಲಿ ಮಧುಕರಶೆಟ್ಟಿಯಂತಹ ಮಾನವೀಯತೆಯ ಚಿಂತನೆಯನ್ನು ಬಿತ್ತಬೇಕು. ಇಂದಿನ ಸಮಾಜ, ಪ್ರಪಂಚಕ್ಕೆ ಮಧುಕರ ಶೆಟ್ಟಿ ಅವರ ಚಿಂತನೆ ಅನಿವಾರ್ಯವಾಗಿದ್ದು, ನಾವೆಲ್ಲರೂ ಅದನ್ನು ಸಾಕಾರಗೊಳಿಸೋಣ. ಅವರ ನೆನಪಿಗಾಗಿ ಪ್ರತೀ ವಷರ್ ಪ್ರಶಸ್ತಿ ಪ್ರದಾನಿಸಲಾಗುತ್ತಿದೆ ಎಂದು ಅಬ್ದುಲ್ ಅಹದ್ ಹೇಳಿದರು.
ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಶಿವಮೊಗ್ಗ ಜಿಪಂ ಸಿಇಒ ಹೇಮಂತ್, ‘ಮಧುಕರ್ ಶೆಟ್ಟಿ 1999ರಲ್ಲಿ ಪೊಲೀಸ್ ಸೇವೆಗೆ ಸೇರಿಕೊಂಡು 2018ರ ಕೊನೆಯ ತನಕ ಸೇವೆಯಲ್ಲಿದ್ದರು. ಈ ಅವಧಿಯಲ್ಲಿ ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದು, ನೂರಾರು ಅಧೀನ ಸಿಬ್ಬಂದಿ ಅವರ ಜತೆಗೆ ಕೆಲಸ ಮಾಡಿದ್ದಾರೆ. ಕರ್ನಾಟಕ ಪೊಲೀಸ್ ಅಕಾಡಮಿ ಹಾಗೂ ಇಂಡಿಯನ್ ಪೊಲೀಸ್ ಅಕಾಡೆಮಿಯಲ್ಲಿ ಸಾವಿರಾರು ಮಂದಿಗೆ ತರಬೇತಿ ನೀಡಿದ್ದಾರೆ ಎಂದು ನೆನದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಡಾ.ಹೇಮಂತ್, ಡಾ.ರಘುನಾಥ, ಡಾ.ಸೋಮಶೇಖರ್, ಸಂತೋಷ್ ಶೆಟ್ಟಿ, ಯೋಗಸಿರಿಯ ಲತಾ, ಕೆಎಸ್ಸಾರ್ಟಿಸಿಯ ರಮ್ಯಾ ಅವರಿಗೆ ಪ್ರಶಸ್ತಿ ಪ್ರದಾನಿಸಲಾಯಿತು. ಈ ಸಂದರ್ಭದಲ್ಲಿ ಡಾ.ಕೆ.ಮಧುಕರ ಶೆಟ್ಟಿ ಗುರುಗಳಾದ ಡಾ.ಬಿ.ಎಸ್.ಸುಬ್ಬರಾವ್,ಪ್ರೊ.ಎಚ್.ಕೆ.ಮೌಳೇಶ್, ಸಿಎಬಿಐ ಸಂಸ್ಥಾಪಕ ಅಧ್ಯಕ್ಷ ಡಾ.ಮಹಾಂತೇಶ ಜಿ. ಸೇರಿದಂತೆ ಪ್ರಮುಖರಿದ್ದರು.