ಸಿ.ಟಿ.ರವಿ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಅವಮಾನ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2024-12-20 12:36 GMT

ಡಿ.ಕೆ.ಶಿವಕುಮಾರ್

ಮಂಡ್ಯ : ʼಬಿಜೆಪಿ ನಾಯಕ ಸಿ.ಟಿ.ರವಿ ಅವರ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಲಾದ ದೊಡ್ಡ ಅವಮಾನʼ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ʼಈ ವ್ಯಕ್ತಿಯಿಂದ ಇಂತಹ ಪ್ರವೃತ್ತಿ ಇದೇ ಮೊದಲಲ್ಲ. ಸಿದ್ದರಾಮಯ್ಯ, ಜಯಮಾಲ ಸೇರಿದಂತೆ ನಮ್ಮ ನಾಯಕರ ಬಗ್ಗೆ ಈ ಹಿಂದೆ ಅನೇಕ ಬಾರಿ ಹೀನಯವಾಗಿ ಮಾತನಾಡಿದ್ದಾರೆ. ಸಿ.ಟಿ.ರವಿ ಅವರ ಹೇಳಿಕೆ ಹಾಗೂ ನಡತೆ ಸರಿಯೋ ತಪ್ಪೋ ಎಂದು ಬಿಜೆಪಿಯ ಎಲ್ಲಾ ನಾಯಕರು ಹೇಳಲಿ. ಪೊಲೀಸರ ವಿಚಾರ ನಂತರ ಮಾತನಾಡೋಣ. ಪೊಲೀಸರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋಣʼ ಎಂದು ತಿಳಿಸಿದರು.

ಚಿಕ್ಕಮಗಳೂರು ಬಂದ್ ಕರೆ ನೀಡಿರುವ ಬಗ್ಗೆ ಕೇಳಿದಾಗ, ʼಚಿಕ್ಕಮಗಳೂರು ಮಾತ್ರವಲ್ಲ, ದೇಶವನ್ನೇ ಬಂದ್ ಮಾಡಲಿ. ಆತ ಮಾಡಿರುವುದು ಘನಕಾರ್ಯವೇ? ಘನಕಾರ್ಯ ಮಾಡಿ ಧೀರಾದಿ ಧೀರನಂತೆ ಬಂದ್ ಮಾಡುತ್ತಾರಾ ಮಾಡಿಕೊಳ್ಳಲಿʼ ಎಂದು ತಿಳಿಸಿದರು.

ಜೀವ ಬೆದರಿಕೆ ಹಾಕಿದ್ದರೆ ಕ್ರಮ ಕೈಗೊಳ್ಳಲಿ :

ನೀವು ಜೀವ ಬೆದರಿಕೆ ಒಡ್ಡಿದ್ದೀರಿ ಎಂದು ಬಿಜೆಪಿ ಆರೋಪ ಮಾಡುತ್ತಿದೆ ಎಂದು ಕೇಳಿದಾಗ, ʼನಾನು ಆ ಜಾಗದಲ್ಲೇ ಇರಲಿಲ್ಲ. ಪರಿಷತ್ ನಲ್ಲಿ 10 ಪ್ರಶ್ನೆಗೆ ಉತ್ತರ ನೀಡಿ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾನು ವಿಧಾನಸಭೆ ಕಲಾಪಕ್ಕೆ ಹೋದೆ. ನಂತರ ಈ ಘಟನೆ ನಡೆದಿದೆ. ನಂತರ ನಾನು ಮತ್ತೆ ಪರಿಷತ್ತಿಗೆ ಹೋದೆ. ಜೀವ ಬೆದರಿಕೆ ಒಡ್ಡಿದ್ದರೆ ತನಿಖೆ ಮಾಡಲಿ, ಎಲ್ಲಾ ವಿಡಿಯೋ ದಾಖಲೆ ಇದೆಯಲ್ಲ. ಜೀವ ಬೆದರಿಕೆ ಹಾಕಿದ್ದರೆ ಕ್ರಮ ಕೈಗೊಳ್ಳಲಿ. ನಾನು ಏನು ದೊಡ್ಡವನಲ್ಲ. ನಾನು ತಪ್ಪು ಮಾಡಿದ್ದರೆ ಕಾನೂನು ಶಿಕ್ಷೆ ನೀಡಲಿದೆʼ ಎಂದರು.

ಒಂದು ಸುಳ್ಳು ಮುಚ್ಚಿಕೊಳ್ಳಲು ನೂರು ಸುಳ್ಳು ಹೇಳಬೇಕಾಗಿದೆ :

ನಾನು ಫಸ್ಟ್ರೇಷನ್ ಎಂದು ಹೇಳಿದ್ದೇನೆ ಹೊರತು ಬೇರೆ ಪದ ಬಳಸಿಲ್ಲ ಎಂಬ ಸಿ.ಟಿ.ರವಿ ಹೇಳಿಕೆ ವಿಚಾರವಾಗಿ ಕೇಳಿದಾಗ, ʼಎಲ್ಲಾ ಮಾಧ್ಯಮಗಳಲ್ಲೂ ಪ್ರಸಾರವಾಗಿದೆ. ಆತ ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಕರೆದಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಇದು ಪ್ರಕಟವಾಗಿವೆ. ಅವರು ಒಂದು ಸುಳ್ಳು ಮುಚ್ಚಿಹಾಕಲು ನೂರು ಸುಳ್ಳು ಹೇಳಬೇಕಾಗಿದೆʼ ಎಂದು ತಿಳಿಸಿದರು.

ವಿಡಿಯೋ ದಾಖಲೆಗಳು ಇಲ್ಲ ಎಂಬ ಸಭಾಪತಿಯವರ ಹೇಳಿಕೆ ಬಗ್ಗೆ ಕೇಳಿದಾಗ, ʼಹಾಗಾದರೆ ಮಾಧ್ಯಮಗಳು ತೋರುತ್ತಿರುವುದು ಸುಳ್ಳಾ?ʼ ಎಂದು ಮರು ಪ್ರಶ್ನೆ ಹಾಕಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News