ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ; ಜ.15ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿದೆ ಎನ್ನಲಾದ ಅಕ್ರಮ ನಿವೇಶನ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜ.15ಕ್ಕೆ ಮುಂದೂಡಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸಿದ್ದರಾಮಯ್ಯ ಅವರ ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ ಪರ ವಕೀಲರು, "ಎರಡು ದಿನಗಳ ಹಿಂದೆಯಷ್ಟೇ ನೋಟಿಸ್ ಜಾರಿಯಾಗಿದ್ದು, ಅದಕ್ಕೆ ಆಕ್ಷೇಪಣೆ ಸಿದ್ದಪಡಿಸಬೇಕಾಗಿದೆ. ಆದ್ದರಿಂದ ಅರ್ಜಿಯ ವಿಚಾರಣೆ ಮುಂದೂಡಬೇಕು" ಎಂದು ಪೀಠಕ್ಕೆ ಮನವಿ ಮಾಡಿಕೊಂಡರು.
ಸಿದ್ದರಾಮಯ್ಯ ಪತ್ನಿ ಪಾರ್ವತಿ ಪರ ಹಾಜರಿದ್ದ ವಕೀಲ ಪ್ರೊ.ರವಿವರ್ಮ ಕುಮಾರ್, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.
ಇದೇ ವೇಳೆ, ಹಗರಣ ಸಂಬಂಧ ಲೋಕಾಯುಕ್ತ ಪೊಲೀಸರು ನಡೆಸುತ್ತಿರುವ ತನಿಖಾ ವರದಿ ಡಿ.24ಕ್ಕೆ ಸಲ್ಲಿಸಬೇಕು. ಅಲ್ಲದೆ, ಸಿಬಿಐಗೆ ಕೋರಿರುವ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ತನಿಖೆಗೆ ತಡೆ ನೀಡುತ್ತಿರುವುದಾಗಿ ಹೈಕೋರ್ಟ್ ಪೀಠ ತಿಳಿಸಿತು.