ಡಾ.ಅಂಬೇಡ್ಕರ್ ಅವರಿಗೆ ಅವಮಾನ : ಬೆಂಗಳೂರಿನಲ್ಲಿ ಅಮಿತ್ ಶಾ ವಿರುದ್ಧ ಆಕ್ರೋಶ

Update: 2024-12-19 15:13 GMT

ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ನಡೆಯನ್ನು ಖಂಡಿಸಿ ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಹೋರಾಟಗಾರರು, ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಟ್ಟು ಹಿಡಿದರು.

ಗುರುವಾರನಗರದ ಫ್ರೀಡಂ ಪಾರ್ಕ್‍ನಲ್ಲಿ ತಮಟೆ ಮೀಡಿಯಾ, ದಲಿತ ವಿದ್ಯಾರ್ಥಿ ಪರಿಷತ್, ಬೆಂಗಳೂರು ವಿವಿ ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟ, ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಜಿಕೆವಿಕೆ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಸಹಯೋಗದೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಅನೇಕ ಜನರ ಪ್ರತಿನಿಧಿಯಾಗಿ ದೇಶ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎನ್ನುವುದನ್ನು ಅಮಿತ್ ಶಾ ತೋರಿಸಬೇಕಿತ್ತು. ಅದು ಅವರ ಜವಾಬ್ದಾರಿ, ಅಮಿತ್ ಶಾ ಅವರು ಗೃಹ ಮಂತ್ರಿ ಯಾಗಿ, ಅಂಬೇಡ್ಕರ್‌ ಅವರನ್ನು ಅವಮಾನಿಸುವ ಹೇಳಿಕೆ ನೀಡಿದ್ದಾರೆ, ಎಂದರೆ, ಮನುವಾದಿಗಳು ಯಾವತ್ತಿಗೂ ಮುಖವಾಡ ಹಾಕಿರುತ್ತಾರೆ ಎಂದು ತಿಳಿಸಿದರು.

ತುಂಬಾ ಸಲ ಸಂವಿಧಾನ, ಬಾಬಾ ಸಾಹೇಬ ಅಂಬೇಡ್ಕರ್ ಅವರ ವಿಷಯ ಬಂದಾಗ ಬಹಳ ನಯವಾಗಿ ಮಾತನಾಡುತ್ತಾರೆ. ಆದರೆ ಒಳಗಡೆ ಮಾನಸಿಕ ಆರೋಗ್ಯವನ್ನು ಕೆಡಿಸುವ ಮನುವಾದ ತುಂಬಿದೆ. ಅದು ಮನುಷ್ಯನಿಗೆ ಬೇರೆ ಮಾರ್ಗವನ್ನು ಹಿಡಿಸುತ್ತದೆ. ಅಮಿತ್ ಶಾ ಅವರೇ ನಿಮ್ಮ ದೇವರನ್ನು ಪ್ರಾರ್ಥಿಸಿ, ಸ್ವರ್ಗ ಸಿಗುತ್ತದೆಯೇ ತೋರಿಸಿ, ನಮ್ಮದೇ ಆದ ಸ್ವರ್ಗವನ್ನು ಸಂವಿಧಾನ ನಮಗೆ ಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕ ಶಿವಸುಂದರ್ ಮಾತನಾಡಿ, ಕರ್ನಾಟಕದಲ್ಲಿ ಸಂಘಪರಿವಾರ ಸಂವಿಧಾನ ಸಮ್ಮಾನ ಅಭಿಯಾನ ಶುರು ಮಾಡಿದೆ. ಅದರಲ್ಲಿ ಅವರು, ಸಂವಿಧಾನವನ್ನು ಕಾಂಗ್ರೆಸ್ ಸರ್ವನಾಶ ಮಾಡಿತು, ಅಂಬೇಡ್ಕರ್ ಮತ್ತು ಸಂವಿಧಾನವನ್ನು ಉಳಿಸುತ್ತಿರುವವರು ನಾವು ಎಂದು ಪ್ರಚಾರ ಮಾಡುತ್ತಿದ್ದಾರೆ. ಅಮಿತ್‍ಶಾ ಅವರು ಬಾಯಿ ತಪ್ಪಿ ಅಂಬೇಡ್ಕರ್ ಅವರ ಕುರಿತು ಅವಹೇಳನ ಮಾತಾಡಿಲ್ಲ. ಇದು ಅವರ ಅಸಲಿ ರೂಪವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇವತ್ತಿಗೂ ಕೂಡ ಗುಜರಾರತ್‍ನ ಸರಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರ ಇಲ್ಲ. ಸರಕಾರ ಭಾರತದ ರಾಷ್ಟ್ರೀಯ ನಾಯಕರ ಪಟ್ಟಿ ಮಾಡಿದೆ, ಅದರಲ್ಲಿ ಶ್ಯಾಮ್‍ಪ್ರಸಾದ್ ಮುಖರ್ಜಿ ಇದ್ದಾರೆ. ಆದರೆ ಅಂಬೇಡ್ಕರ್ ಅವರು ಇಲ್ಲ. ಭೀಮಾ ಕೊರೆಗಾಂವ್‍ಗೆ ಅಂಬೇಡ್ಕರ್ ಅವರು ಹೋಗಿ ಬಂದ ನಂತರ, ಆರೆಸ್ಸೆಸ್‌ ನಾಯಕರೊಬ್ಬರು ಬರೆಯುತ್ತಾರೆ, ಅಂಬೇಡ್ಕರ್‌ ಅವರನ್ನು ನಾಯಕರನ್ನಾಗಿ ಪರಿಗಣಿಸಬಾರದು ಎಂದು, 1932ರಲ್ಲಿ ಮೂಂಜೆ ಎಂಬ ಹಿಂದೂ ಮಹಾಸಭಾದ ನಾಯಕ ಅಂಬೇಡ್ಕರ್ ಅವರಿಗೆ ಸಹಾಯ ಮಾಡುವುದು ಎಂದರೆ, ಹಾವಿಗೆ ಹಾಲು ಎರೆದಂತೆ, ಇದು ಅವರ ಅಸಲಿ ರೂಪವಾಗಿದೆ. ಅವರ ಒಳಗಿನ ವಿಷ ಸಹಜವಾಗಿ ಹೊರಗಡೆ ಬಂದಿದೆ. ಅಂಬೇಡ್ಕರ್ ಅವರನ್ನು ನಾಶ ಮಾಡುವ ಯೋಜನೆಯನ್ನು ಮನುವಾದಿಗಳು ರೂಪಿಸಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಪ್ರತಿಭಟನಾನಿರತರು ಗೃಹ ಸಚಿವ ಅಮಿತ್‍ಶಾ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ, ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಹೋರಾಟಗಾರರಾದ ಹೆಬ್ಬಾಳ ವೆಂಕಟೇಶ್, ಪುರುಷೋತ್ತಮ ದಾಸ್, ಹುಲಿಕುಂಟೇ ಮೂರ್ತಿ, ರೈತ ಹೋರಾಟಗಾರ ಜೆ.ಎಂ.ವೀರಸಂಗಯ್ಯ, ವಿದ್ಯಾರ್ಥಿ ಮುಖಂಡರಾದ ಲೇಖಾ, ಯುವಚಿಂತಕ ವಿ.ಎಲ್.ನರಸಿಂಹಮೂರ್ತಿ, ವಕೀಲ ವಿನಯ್ ಶ್ರೀನಿವಾಸ್, ವಿಕಾಸ್.ಆರ್.ಮೌರ್ಯ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News