ಕಲಬುರಗಿ, ವಿಜಯಪುರ ಸೇರಿ ಮೂರು ಜಿಲ್ಲೆಗಳಿಗೆ ಶೀತ ಗಾಳಿಯ ಎಚ್ಚರಿಕೆ
Update: 2024-12-18 17:19 GMT
ಬೆಂಗಳೂರು : ರಾಜ್ಯದಲ್ಲಿ ಚಳಿ ಮತ್ತು ಮಂಜಿನ ಅಬ್ಬರ ಜೋರಾಗಿದ್ದು, ಮುಖ್ಯವಾಗಿ ಉತ್ತರ ಒಳನಾಡಿನಲ್ಲಿ ಶೀತ ಅಲೆಗಳ ಅಬ್ಬರ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಇಂದಿನಿಂದ(ಡಿ.19) ಮೂರು ದಿನಗಳ ಕಾಲ ಮೂರು ಜಿಲ್ಲೆಗಳಿಗೆ ತೀವ್ರ ಶೀತ ಗಾಳಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಬೀದರ್, ಕಲಬುರಗಿ, ವಿಜಯಪುರ ಶೀತ ಗಾಳಿಯ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 4 ಡಿಗ್ರಿ ಕಡಿಮೆ ಇರಲಿದೆ. ಇನ್ನು ಒಳನಾಡಿನ ಒಂದೆರಡು ಜಿಲ್ಲೆಗಳಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರು ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 25 ಮತ್ತು 15 ಡಿಗ್ರಿ ದಾಖಲಾಗಲಿದೆ ಎಂದು ಹೇಳಿದೆ.