ಡಿ.31ರಿಂದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

Update: 2024-12-17 05:42 GMT

ಬೆಂಗಳೂರು : 38 ತಿಂಗಳ ವೇತನ ಹಿಂಬಾಕಿ ಪಾವತಿ, ಹೊಸ ವೇತನ ಪರಿಷ್ಕರಣೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಡಿ.31ರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಅನಿರ್ದಿಷ್ಟಾವದಿ ಮುಷ್ಕರ ನಡೆಯಲಿದೆ ಎಂದು ಕೆಎಸ್ಸಾರ್ಟಿಸಿ ಸ್ಟಾಫ್ಟ್ ಆ್ಯಂಡ್ ವರ್ಕರ್ಸ್‌ ಫೆಡರೇಶನ್‌ನ ಎಚ್.ವಿ.ಅನಂತಸುಬ್ಬರಾವ್ ತಿಳಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು, ಹಿಂದಿನ ವೇತನ ಹೆಚ್ಚಳ 38 ತಿಂಗಳ ಬಾಕಿ ಉಳಿಯಲು ಸರಕಾರ ಹಾಗೂ ಆಡಳಿತ ವರ್ಗದ ವಿಳಂಬ ಧೋರಣೆಯೇ ಕಾರಣವಾಗಿದ್ದು, ಸಾರಿಗೆ ನೌಕರರು ಯಾವುದೇ ರೀತಿಯಿಂದಲೂ ಹೊಣೆಗಾರರಲ್ಲ. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ 'ಶಕ್ತಿ' ಯೋಜನೆಯಿಂದ ಸರಕಾರಕ್ಕೆ ಹಾಗೂ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದ ಲಾಭ ದೊರೆತಿದೆ. ಹಲವು ಹತ್ತು ಸಮಸ್ಯೆಗಳನ್ನು ಅನುಭವಿಸಿ ಸಾರಿಗೆ ಕಾರ್ಮಿಕರು ಈ ಯೋಜನೆಯನ್ನು ಯಶಸ್ವಿಗೊಳಿಸಿ ಹೈರಾಣಾಗಿದ್ದಾರೆ. ಆದ್ದರಿಂದ 38 ತಿಂಗಳ ಬಾಕಿ ಹಣ, ಜನವರಿ 1ರಿಂದ ಹೊಸ ವೇತನ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕಾಗಿರುವುದು ಸರಕಾರದ ಹಾಗೂ ಆಡಳಿತ ವರ್ಗದ ಜವಾಬ್ದಾರಿಯಾಗಿದೆ ಎಂದು ಒತ್ತಾಯಿಸಿದ್ದಾರೆ.

ಒಂದು ವರ್ಷದಿಂದ ಹಲವು ಬಾರಿ ಮನವಿ ಸಲ್ಲಿಸಿ ತಾಳ್ಮೆಯಿಂದ ಶಾಂತಿಯುತ ಧರಣಿ, ಉಪವಾಸ ಸತ್ಯಾಗ್ರಹ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸರಕಾರವನ್ನು ಒತ್ತಾಯಿಸಿದ್ದೇವೆ. ನಮ್ಮ ನ್ಯಾಯಯುತ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿರುವ ರಾಜ್ಯ ಸರಕಾರವನ್ನು ಎಚ್ಚರಿಸಿ ನಮ್ಮ ಬೇಡಿಕೆಗಳನ್ನು ಪಡೆಯಲು ಅನಿರ್ದಿಷ್ಟ ಮುಷ್ಕರ ಬಿಟ್ಟರೆ ನಮಗೆ ಅನ್ಯ ಮಾರ್ಗವಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News