ಬೆಂಗಳೂರು | ಹೊಸ ವರ್ಷಾಚರಣೆಗೆ ಡ್ರಗ್ಸ್ ಸಾಗಾಟ : 24 ಕೋಟಿ ಮೌಲ್ಯದ ಎಂಡಿಎಂಎ ಜಪ್ತಿ
ಬೆಂಗಳೂರು : ಹೊಸ ವರ್ಷಾಚರಣೆಗೆ ಡ್ರಗ್ಸ್ ಸಾಗಾಟಕ್ಕೆ ಯತ್ನಿಸುತ್ತಿದ್ದ ಕುರಿತು ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು, ದಾಳಿ ನಡೆಸಿ, ಮೊದಲ ಬಾರಿ 24 ಕೋಟಿ ಮೌಲ್ಯದ ನಿಷೇಧಿತ ಎಂಡಿಎಂಎ ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದಾರೆ.
ಪ್ರಕರಣ ಸಂಬಂಧ ನೈಜೀರಿಯಾ ಮೂಲದ ಮಹಿಳೆ ರೋಝೆಮ್ ಎಂಬಾಕೆಯನ್ನು ಬಂಧಿಸಲಾಗಿದ್ದು, ಈಕೆ ಕೆಲ ವರ್ಷಗಳಿಂದ ಕೆ. ಆರ್.ಪುರಂನ ಟಿ. ಸಿ. ಪಾಳ್ಯದಲ್ಲಿ ನೆಲೆಸಿದ್ದರು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿದ್ದಾರೆ.
ಆರೋಪಿಯ ವೀಸಾ ಅವಧಿ ಗಡುವು ಮುಗಿದರೂ ನಗರದಲ್ಲಿ ವಾಸ್ತವ್ಯ ಹೂಡಿದ್ದಳು. ಜೀವನಕ್ಕಾಗಿ ಪ್ರಾವಿಷನ್ ಸ್ಟೋರ್ ಅಂಗಡಿ ಇಟ್ಟುಕೊಂಡಿದ್ದ ಆರೋಪಿತೆಯು ಮೋಜಿನ ಜೀವನ ಮಾಡಲು ಹಾಗೂ ಹೆಚ್ಚಿನ ಹಣ ಸಂಪಾದಿಸಲು ವಾಮಮಾರ್ಗ ಕಂಡುಕೊಂಡಿದ್ದಳು ಎನ್ನುವ ಮಾಹಿತಿ ವಿಚರಣೆಯಲ್ಲಿ ಗೊತ್ತಾಗಿದೆ.
ವ್ಯವಸ್ಥಿತ ಜಾಲದ ಮೂಲಕ ಡ್ರಗ್ಸ್ ದಂಧೆಕೋರರನ್ನು ಸಂಪರ್ಕಿಸುತ್ತಿದ್ದ ಆರೋಪಿಯು, 24 ಕೋಟಿ ಮೌಲ್ಯದ ನಿಷೇಧಿತ 12 ಕೆಜಿ ಎಂಡಿಎಂಎ ಕ್ರಿಸ್ಟಲ್ ತರಿಸಿಕೊಂಡು ಸಂಗ್ರಹಿಸಿದ್ದಳು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕವಸ್ತು ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿಯು ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗಾಗಿ ಶೋಧ ನಡೆಸಲಾಗುತ್ತಿದೆ. ಇಬ್ಬರು ಆರೋಪಿಗಳ ವಿರುದ್ಧ ಕೆ.ಆರ್. ಪುರಂ ಠಾಣೆಯಲ್ಲಿ ಎನ್‍ಡಿಪಿಎಸ್ ಹಾಗೂ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.