ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ : ಕುಮಾರಸ್ವಾಮಿ

Update: 2024-12-20 13:37 GMT

ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು : ‘ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ. ಪ್ರತಿಪಕ್ಷ ನಾಯಕರಿಗೇ ರಕ್ಷಣೆ ಇಲ್ಲ ಎಂದ ಮೇಲೆ ವಿಧಾನ ಮಂಡಲದಲ್ಲಿ ಯಾರ ಭಾವಚಿತ್ರ ಹಿಡಿದರೇನು ಫಲ? ಪರಿಷತ್ ಸದಸ್ಯ ಸಿ.ಟಿ.ರವಿಮೇಲೆ ಸುವರ್ಣಸೌಧದಲ್ಲಿಯೇ ಹಲ್ಲೆ ಯತ್ನ ನಡೆದಿರುವುದು ಖಂಡನೀಯ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಗೌರವಾನ್ವಿತ ಸಚಿವೆ ಬಗ್ಗೆ ಸಿ.ಟಿ.ರವಿ ಅಶ್ಲೀಲ ಪದ ಬಳಸಿದ್ದರೆ ಅದನ್ನು ನಾನು ಸಮರ್ಥಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಸಚಿವೆ ವರ್ತಿಸಿದ ರೀತಿ, ಅವರ ಬೆಂಬಲಿಗರ ಗೂಂಡಾಗಿರಿ ಅತಿರೇಕದ್ದು. ಎಲ್ಲದ್ದಕ್ಕೂ ಡಾ.ಅಂಬೇಡ್ಕರ್ ಸಂವಿಧಾನದಡಿಯಲ್ಲಿ ರೂಪಿತವಾದ ಕಾನೂನಿದೆ. ಸಭಾಪತಿ ರೂಲಿಂಗ್ ನೀಡಿದ್ದಾರೆ. ಆ ನಂತರವೂ ನಡೆಯುತ್ತಿರುವ ಘಟನಾವಳಿಗಳು, ಸಭಾಪತಿಗಳನ್ನೇ ನಿಂದಿಸುವ ಕೆಟ್ಟ ನಡವಳಿಕೆಗಳು ಆಘಾತಕಾರಿ. ಸರಕಾರದಲ್ಲಿರುವ ಕೆಲವರು ಈ ಘಟನೆಗೆ ಜ್ವಾಲೆ ಸ್ವರೂಪ ನೀಡಿ ಪ್ರಚೋದಿಸುತ್ತಿರುವುದು ಕಳವಳಕಾರಿ ಎಂದು ಹೇಳಿದ್ದಾರೆ.

‘ಮೀಸಲಾತಿಗಾಗಿ ಪಂಚಮಸಾಲಿ ಮುಖಂಡರು ಸುವರ್ಣಸೌಧದ ಮುಂದೆ ಪ್ರತಿಭಟಿಸಿದ್ದಕ್ಕೆ ಪೊಲೀಸರಿಂದ ಲಾಠಿಚಾರ್ಜ್ ಮಾಡಿಸಿ ಪೌರುಷ ಮೆರೆದಿತ್ತು ಕಾಂಗ್ರೆಸ್ ಸರಕಾರ. ಅಂದು ಪೊಲೀಸರ ಪ್ರತಾಪ ಹೇಳತೀರದು. ಗೇಟಿನಲ್ಲಿಯೇ ತಡೆದು ಆ ಪಂಚಮಸಾಲಿ ಜನರಿಗೆ ರಕ್ತ ಬರುವಂತೆ ಲಾಠಿ ಬೀಸಿದ ಪೆÇಲೀಸರೇ.., ಈ ಗೂಂಡಾಗಳು ಸುವರ್ಣಸೌಧದೊಳಕ್ಕೆ ಹೇಗೆ ಬಂದರು? ಅಥವಾ... ಅವರೇ ನಿಮ್ಮ ಕಣ್ತಪ್ಪಿಸಿ ಒಳ ನುಸಳಿದರೋ ಅಥವಾ ಸರಕಾರವೇ ಷಡ್ಯಂತ್ರ ಮಾಡಿ ಒಳ ನುಗ್ಗಿಸಿತೋ? ಇಲ್ಲವೇ ಯಾವುದಾದರೂ ಕಲ್ಲು ಬಂಡೆಯ ಕರಾಮತ್ತು, ಕುಮ್ಮಕ್ಕು ಇದೆಯಾ?’ ಎಂದು ಅವರು ಪ್ರಶ್ನಿಸಿದ್ದಾರೆ.

ಸದನದ ಕಾರಿಡಾರಿನಲ್ಲಿಯೇ ಆ ಗೂಂಡಾಗಳು ಶಾಸಕರನ್ನು ಅಟ್ಟಾಡಿಸುತ್ತಾರೆ, ಕೊಲೆಗೆತ್ನಿಸುತ್ತಾರೆ, ಮಾರ್ಷಲ್'ಗಳನ್ನು ಕೆಳಕ್ಕೆ ಕೆಡವಿ ಕ್ರಿಮಿನಲ್ ಪ್ರವೃತ್ತಿ ಮೆರೆಯುತ್ತಾರೆಂದರೆ ಬಂಡೆ ಬೆಂಬಲವಿದೆ ಎಂದೇ ಅರ್ಥ. ಆ ಗೌರವಾನ್ವಿತ ಸಚಿವೆಯ ಆಪ್ತ ಸಹಾಯಕ ಶಾಸಕರ ಮೇಲೇರಿ ಹೋಗುವ, ಕಾರಿಡಾರಿನ ಕಬ್ಬಿಣದ ಬಾಗಿಲನ್ನೇ ಮುರಿಯಲೆತ್ನಿಸಿ ಹಲ್ಲೆಗೆ ಯತ್ನಿಸುವ ದೃಶ್ಯಗಳು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ರಾಜ್ಯದಲ್ಲಿ ಆಡಳಿತ ಸುರಕ್ಷಿತ ಕೈಗಳಲ್ಲಿ ಇಲ್ಲ ಎನ್ನುವುದಕ್ಕೆ ಆ ದೃಶ್ಯಗಳೇ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.

ಸುವರ್ಣಸೌಧಕ್ಕೆ ನುಗ್ಗಿದ ಗೂಂಡಾಗಳನ್ನು ಕೂಡಲೇ ಬಂಧಿಸಿ, ಅವರ ವಿರುದ್ಧ ರೌಡಿಪಟ್ಟಿ ತೆರೆಯಬೇಕು. ಸಮಾಜದ ಶಾಂತಿಗೆ ಬೆದರಿಕೆಯಾಗಿರುವ ಆ ಕಿಡಿಗೇಡಿಗಳನ್ನು ಸುವರ್ಣಸೌಧ, ವಿಧಾನಸೌಧದಿಂದ ಶಾಶ್ವತವಾಗಿ ನಿಬರ್ಂಧಿಸಬೇಕು. ಪೊಲೀಸರೇ.., ಇಡೀ ಪ್ರಕರಣದ ಬಗ್ಗೆ ನೀವು ಉತ್ತರಿಸಬೇಕಾಗುತ್ತದೆ. ಇಡೀ ರಾತ್ರಿ ಸಿ.ಟಿ.ರವಿ ಅವರನ್ನು ಪೊಲೀಸ್ ಜೀಪಿನಲ್ಲಿ ಸುತ್ತಿಸುತ್ತೀರಿ ಎಂದರೆ, ಇದಕ್ಕೆ ಯಾರ ಫರ್ಮಾನು ಕಾರಣ? ಈ ಗೂಂಡಾಗಳ ಗ್ಯಾಂಗ್ ಲೀಡರ್ ಯಾರು? ನಿಮಗೆ ಎಲ್ಲ ಮಾಹಿತಿ ಇರುತ್ತದೆ, ನೀವೂ ಸತ್ಯ ಹೇಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News