ಭಾರತ-ಇಸ್ರೇಲ್ ವಾಣಿಜ್ಯ ಶೃಂಗಸಭೆ ಫೆಲೆಸ್ತೀನ್‌ನ ನರಮೇಧ ಸಮರ್ಥಿಸಿದಂತೆ : ಖಗೋಳ ವಿಜ್ಞಾನಿ ಪ್ರಜ್ವಲ್ ಶಾಸ್ತ್ರಿ
ಬೆಂಗಳೂರು : ಇಸ್ರೇಲ್ ಸರಕಾರವು ಫೆಲೆಸ್ತೀನ್ ಹಾಗೂ ಲೆಬನಾನ್ ವಿರುದ್ಧ ನಿರಂತರವಾಗಿ ಘೋರ ಕೃತ್ಯಗಳನ್ನು ನಡೆಸುತ್ತಿರುವ ಹೊತ್ತಿನಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯು ಭಾರತ-ಇಸ್ರೇಲ್ ನಡುವೆ ವಾಣಿಜ್ಯ ಶೃಂಗಸಭೆಯನ್ನು ಹಮ್ಮಿಕೊಂಡಿರುವುದು ಖಂಡನೀಯವಾಗಿದ್ದು, ಇಂತಹ ಶೃಂಗಸಭೆಗಳು ಫೆಲೆಸ್ತೀನ್‌ನ ನರಮೇಧವನ್ನು ಸಮರ್ಥಿಸಿದಂತೆ ಎಂದು ಖಗೋಳ ವಿಜ್ಞಾನಿ ಪ್ರಜ್ವಲ್ ಶಾಸ್ತ್ರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ಬೆಂಗಳೂರು ಫೆಲೆಸ್ತೀನ್ ಸಾಲಿಡಾರಿಟಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆ, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಬೆಂಗಳೂರು, ರಾಷ್ಟ್ರೀಯ ಉನ್ನತ ಸಂಶೊಧನಾ ಸಂಸ್ಥೆ ಹಾಗೂ ಕರ್ನಾಟಕ ಸರಕಾರ ಈ ವಾಣಿಜ್ಯ ಶೃಂಗಸಭೆಯಲ್ಲಿ ತೊಡಗಿಸಿಕೊಂಡಿರುವುದನ್ನು ತೀವ್ರವಾಗಿ ಖಂಡಿಸಲಾಯಿತು.
ಆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಖಗೋಳ ವಿಜ್ಞಾನಿ ಪ್ರಜ್ವಲ್ ಶಾಸ್ತ್ರಿ, ಜಗತ್ತಾದ್ಯಂತ ವಿಶ್ವವಿದ್ಯಾಲಯಗಳು ಇಸ್ರೇಲ್‌ನೊಂದಿಗೆ ಸಂಬಂಧಕ್ಕೆ ಕಡಿವಾಣ ಹಾಕುತ್ತಿರುವಾಗ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ರೀತಿ ಇಸ್ರೇಲ್ ಜೊತೆ ಕೈಜೋಡಿಸಿ, ನ್ಯಾಯದ ವಿರುದ್ಧ ಹಾಗು ಅಂತಾರಾಷ್ಟ್ರೀಯ ಕಾನೂನಿನ ವಿರುದ್ಧ ನಿಂತಿವೆ ಎಂದರು.
ಗಾಝಾದಲ್ಲಿ ನರಮೇಧ ಮತ್ತು ಲೆಬನಾನ್‌ನ ಜನತೆಯ ವಿರುದ್ಧ ಹಿಂಸಾತ್ಮಕ ಕ್ರಿಯೆಗಳನ್ನು ಇಸ್ರೇಲ್ ತೀಕ್ಷ್ಣಗೊಳಿಸುತ್ತ ಸಾವಿರಾರು ಜನರ ಹತ್ಯೆಗೆ ಕಾರಣವಾಗಿರುವ ಸಮಯದಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯು ತನ್ನ ಸಭಾಂಗಣವನ್ನು ಶೃಂಗಸಭೆಗೆ ನೀಡಿದ ನಿರ್ಧಾರ ಸರಿಯಲ್ಲ ಎಂದು ಪ್ರಜ್ವಲ್ ಶಾಸ್ತ್ರಿ ವಿರೋಧ ವ್ಯಕ್ತಪಡಿಸಿದರು.
ನಮ್ಮ ಶೈಕ್ಷಣಿಕ ಸಂಸ್ಥೆಗಳು ಶಾಂತಿ ಮತ್ತು ಸಮಾನತೆಯ ಬಾಳ್ವೆಗೋಸ್ಕರ ಜ್ಞಾನಾರ್ಥಿಗಳಾಗಿದ್ದಾವೆಯೇ, ಅಥವಾ ಹಿಂಸೆ, ಘರ್ಷಣೆ ಕದನಗಳನ್ನು ಪ್ರೋತ್ಸಾಹಿಸುತ್ತಿರುವೆಯೇ?. ಪ್ರಸ್ತುತ ಸಂದರ್ಭವನ್ನು ಪರಿಗಣಿಸದೆಯೇ ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆ, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ರಾಷ್ಟ್ರೀಯ ಉನ್ನತ ಸಂಶೊಧನಾ ಸಂಸ್ಥೆಗಳು ಕೂಡಿ ವಾಣಿಜ್ಯ ಶೃಂಗಸಭೆಯನ್ನು ಜರುಗಿಸಿರುವುದು ಅತ್ಯಂತ ದುಖಃಕರ ಎಂದು ಪ್ರಜ್ವಲ್ ಶಾಸ್ತ್ರಿ ಹೇಳಿದರು.
ಮಧು ಭೂಷಣ್ ಅವರು ಮಾತನಾಡಿ, ಫೆಲೆಸ್ತೀನ್‌ನ ಜನತೆಯ ಮೇಲೆ ಇಸ್ರೇಲ್ ತನ್ನ ಅಸ್ತ್ರಗಳ ಶೋಧನೆ ಮಾಡುತ್ತಿದೆ. ಅದನ್ನು ವಾಣಿಜ್ಯ ಶೃಂಗಸಭೆಯು ಬೆಂಬಲಿಸುವುದೇ, ನಮ್ಮ ಶೈಕ್ಷಣಿಕ ಸಂಸ್ಥೆಗಳಿಗೆ ಇಂತಹದನ್ನು ಪ್ರಶ್ನಿಸುವ ನೈತಿಕತೆ ಇಲ್ಲವೇ ಎಂದು ಪ್ರಶ್ನಿಸಿದರು.
ಫೆಲೆಸ್ತೀನ್ ಜನರಿಗೂ ಜೀವಿಸುವ ಹಕ್ಕಿದೆ, ಅದರೊಂದಿಗೆ ನಾವು ನಿಲ್ಲಬೇಕು. ನಮ್ಮ ಶೆಕ್ಷಣಿಕ ಸಂಸ್ಥೆಗಳ ಈ ನಡೆಯಿಂದ ನಮಗೆ ಬಹಳ ನೋವುಂಟಾಗಿದೆ. ವಿಜ್ಞಾನ ಮತ್ತು ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಎತ್ತಿಹಿಡಿಯುವಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿಕೊಳ್ಳುವ ಭಾರತೀಯ ವಿಜ್ಞಾನ ಸಂಸ್ಥೆಯು ತನ್ನ ಸ್ವಂತ ಅಧಿಕಾರ ವ್ಯಾಪ್ತಿಯಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ನಾಶಪಡಿಸಿದ ಇಸ್ರೇಲ್ ಸರಕಾರದೊಂದಿಗೆ ಸಹಕರಿಸುತ್ತಿರುವುದು ಆಘಾತಕಾರಿಯಾಗಿದೆ ಎಂದು ಮಧು ಭೂಷಣ್ ಕಳವಳ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತದ ಹಾಗೂ ಫೆಲೆಸ್ತೀನ್‌ನ ಬಾವುಟಗಳನ್ನು ಹಿಡಿದು ನಮ್ಮ ಶೈಕ್ಷಣಿಕ ಸಂಸ್ಥೆಗಳು, ಮಾನವ ಹಕ್ಕುಗಳು ಮತ್ತು ನ್ಯಾಯದ ಸಾರ್ವತ್ರಿಕ ಮೌಲ್ಯಗಳೊಂದಿಗೆ ಎತ್ತಿಹಿಡಿಯಬೇಕು. ವಾಣಿಜ್ಯ ಶೃಂಗಸಭೆಯಲ್ಲಿ ಭಾಗವಹಿಸುವುದನ್ನು ರದ್ದುಗೊಳಿಸಬೇಕು ಮತ್ತು ಇಸ್ರೇಲ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧದ ಸಾಮೂಹಿಕ ಕರೆಗೆ ಸೇರಬೇಕು ಎಂದು ಒತ್ತಾಯಿಸಲಾಯಿತು.
ಫೆಲೆಸ್ತೀನ್‌ನಲ್ಲಿ ಮಕ್ಕಳು, ಮಹಿಳೆಯರ ಹತ್ಯೆಯನ್ನೊಳಗೊಂಡ ನರಮೇಧವನ್ನು ನೋಡುತ್ತಿದ್ದೇವೆ. ಹೀಗಿದ್ದಾಗಲೂ ಕೂಡ ನಮ್ಮ ಶೈಕ್ಷಣಿಕ ಸಂಸ್ಥೆಗಳು ಇಸ್ರೇಲ್ ಜೊತೆ ವಾಣಿಜ್ಯ ಸಂಬಂಧಗಳನ್ನು ಬೆಳೆಸುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
-ಕ್ಲಿಫ್ಟನ್ ಡಿ ರೊಜಾರಿಯೊ, ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟೀಸ್.