ಬೆಂಗಳೂರು | ಡ್ರಗ್ಸ್ ಮಾರಾಟ ಪ್ರಕರಣ : ಇಬ್ಬರ ಸೆರೆ, 1.50 ಕೋಟಿ ರೂ. ಮೌಲ್ಯದ ಎಂಡಿಎಂಎ ವಶಕ್ಕೆ
ಬೆಂಗಳೂರು : ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಪ್ರಕರಣದಡಿ ವಿದೇಶಿ ಪ್ರಜೆ ಹಾಗೂ ಸ್ಥಳೀಯ ಮಹಿಳೆಯನ್ನು ಇಲ್ಲಿನ ಸಿಸಿಬಿ ಪೊಲೀಸರು ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ನೈಜೀರಿಯಾ ಮೂಲದ ಮಿಖಾಯಿಲ್ ಡೈಕೆ ಒಕೋಲಿ(41) ಹಾಗೂ ಬೆಂಗಳೂರಿನ ಸಹನಾ ದಾಸ್(25) ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 1.50 ಕೋಟಿ ರೂ. ಮೌಲ್ಯದ 1 ಕೆ.ಜಿ. 50 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 3 ಮೊಬೈಲ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ಜು.24ರಂದು ನೈಜೀರಿಯಾ ಮೂಲದ ಚುಕುದ್ವೇಮ್ ಜಸ್ಟೀಸ್ ನ್ವಾಫಾರ್ ಎಂಬಾತನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಆತನಿಂದ 4 ಕೆ.ಜಿ. ಎಂಡಿಎಂಎ ಕ್ರಿಸ್ಟೆಲ್‍ಗಳನ್ನು ವಶಪಡಿಸಿಕೊಂಡಿದ್ದರು. ತನಿಖಾ ಕಾಲದಲ್ಲಿ ಈ ಆರೋಪಿಯು ಮಿಖಾಯಿಲ್ ಡೈಕೆ ಒಕೋಲಿಯಿಂದ ಎಂಡಿಎಂಎ ಖರೀದಿಸಿದ್ದಾಗಿ ಹೆಸರನ್ನಷ್ಟೇ ತಿಳಿಸಿದ್ದ. ಆರೋಪಿಯ ಪತ್ತೆಕಾರ್ಯ ಮುಂದುವರೆಸಿದ್ದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಯರಪ್ಪನಹಳ್ಳಿಯ ಬಾಲಾಜಿ ಲೇಔಟ್‍ನಲ್ಲಿ ವಾಸವಾಗಿದ್ದ ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.
ಈ ಹಿಂದೆ ಕೆ.ಆರ್.ಪುರಂನಲ್ಲಿ ವಾಸವಿದ್ದ ಮಿಖಾಯಿಲ್ ಡೈಕೆ ಒಕೋಲಿಗೆ ಪಕ್ಕದ ಮನೆಯಲ್ಲಿ ವಾಸವಿದ್ದ ಸಹನಾಳ ಪರಿಚಯವಾಗಿತ್ತು. ಬಳಿಕ ಇಬ್ಬರು ಯರಪ್ಪನಹಳ್ಳಿಯ ಬಾಲಾಜಿ ಲೇಔಟ್‍ನಲ್ಲಿ ವಾಸವಾಗಿದ್ದರು. ಮಿಖಾಯಿಲ್ ವಿರುದ್ಧ 2018ರಲ್ಲಿಯೂ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.