ದಿಲ್ಲಿ ಮಾದರಿಯಲ್ಲಿ ಬ್ಯಾಟರಿ ಆಧಾರಿತ ಆಟೊಗಳ ನಿಯಮಾವಳಿ ಅಳವಡಿಸಿ: ಮುಖ್ಯಮಂತ್ರಿ ಚಂದ್ರು

Update: 2024-12-26 16:59 GMT

ಮುಖ್ಯಮಂತ್ರಿ ಚಂದ್ರು

ಬೆಂಗಳೂರು : ರಾಜ್ಯದಲ್ಲಿನ ಬ್ಯಾಟರಿ ಆಧಾರಿತ ಅಟೊಗಳ ಪರವಾನಿಗೆ ವಿಷಯದಲ್ಲಿ ತಮಿಳುನಾಡು ಹಾಗೂ ದಿಲ್ಲಿ ಸರಕಾರಗಳು ಕೈಗೊಂಡಿರುವ ನಿಯಮಾವಳಿಗಳನ್ನು ರಾಜ್ಯದಲ್ಲೂ ಅಳವಡಿಸಿ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಗುರುವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದಲ್ಲಿನ ಹಲವು ನಗರಗಳಲ್ಲಿ ಮೀಟರ್ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಟರಿ ಚಾಲಿತ ಆಟೊಗಳು ರಾಜ್ಯದ ಸಾರಿಗೆ ಇಲಾಖೆಯ ಯಾವುದೇ ಕಾನೂನುಗಳಿಗೆ ಒಳಪಡದೆ ಇರುವ ಕಾರಣದಿಂದಾಗಿ ಮೆಥನಲ್ ಮತ್ತು ಇಥೆನಾಲ್ ಇಂಧನ ಬಳಸಿ ಸಂಚರಿಸುತ್ತಿರುವ ಪಾರಂಪರಿಕ ಆಟೊಗಳ ಚಾಲಕರ ಆದಾಯದಲ್ಲಿ ಬಹಳಷ್ಟು ವ್ಯತ್ಯಯ ಉಂಟಾಗುತ್ತಿದೆ. ಆರ್ಥಿಕವಾಗಿ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಯಾವುದೇ ಸಾರಿಗೆ ನಿಯಮಾವಳಿಗಳ ಅಂಕುಶವಿಲ್ಲದ ಬ್ಯಾಟರಿ ಚಾಲಿತ ಆಟೊಗಳು ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ರಸ್ತೆಗಳಿದಿರುವ ಪರಿಣಾಮ ಸರಕಾರದ ಸಾರಿಗೆ ನಿಯಮಗಳ ಪ್ರಕಾರ ಪರವಾನಿಗೆ ತೆಗೆದುಕೊಂಡು ಪ್ರಾಮಾಣಿಕವಾಗಿ ತೆರಿಗೆ ಕಟ್ಟಿಕೊಂಡು ಬರುತ್ತಿರುವ ಮಿಥೇನಾಲ್ ಹಾಗೂ ಇಥೆನಾಲ್ ಇಂಧನ ಬಳಸಿ ಓಡಿಸುತ್ತಿರುವ ಲಕ್ಷಾಂತರ ಬಡ ಆಟೊ ಚಾಲಕರು ತಮ್ಮ ಸಂಸಾರವನ್ನು ನಿರ್ವಹಿಸಲೂ ಸಾಧ್ಯವಾಗದ ಪರಿಸ್ಥಿತಿಗೆ ದೂಡಲ್ಪಟ್ಟಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆದ್ದರಿಂದ ತಮಿಳುನಾಡು ಹಾಗೂ ದಿಲ್ಲಿ ರಾಜ್ಯ ಸರಕಾರಗಳು ಬ್ಯಾಟರಿ ಆಧಾರಿತ ಆಟೊಗಳಿಗೆ ಸೂಕ್ತ ನಿಯಮಾವಳಿಗಳನ್ನು ರೂಪಿಸಿ ಎರಡೂ ವರ್ಗಗಳ ಆಟೊ ಚಾಲಕರು ಸರಳವಾಗಿ ಜೀವನವನ್ನು ನಡೆಸುವ ವಾತಾವರಣವನ್ನು ಕಲ್ಪಿಸಿಕೊಟ್ಟಿದ್ದಾರೆ. ತಾವು ಸಹ ಇದೇ ಮಾದರಿಯನ್ನು ಅನುಸರಿಸಿ ಬ್ಯಾಟರಿ ಆಧಾರಿತ ಆಟೋಗಳಿಗೆ ಉಚಿತ ಪರವಾನಿಗೆ ಹಾಗೂ ಕೆಲವು ನಿಯಮಾವಳಿಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದ್ದಾರೆ. 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News