ಗಾಂಧಿ ಸ್ಮರಣೆಯ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಬೇಡ ; ಸರ್ವೊದಯ ಕರ್ನಾಟಕದ ಸದಸ್ಯರ ಆಗ್ರಹ

Update: 2024-12-25 16:38 GMT

ಸುವರ್ಣ ಸೌಧದ ಆವರಣದಲ್ಲಿ ಮಹಾತ್ಮಾ ಗಾಂಧೀಜಿಯವರ ಪುತ್ಥಳಿ ಅನಾವರಣ ಸಮಾರಂಭದ ಪೂರ್ವಸಿದ್ಧತೆಗಳನ್ನು ಪರಿಶೀಲಿಸುತ್ತಿರುವ ಸಚಿವರು

ಬೆಂಗಳೂರು : ಗಾಂಧೀಜಿ ಅಧ್ಯಕ್ಷತೆಯ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ‘ಗಾಂಧಿ ಭಾರತ’ ಕಾರ್ಯಕ್ರಮ ಆಯೋಜನೆಗೆ ಸಚಿವ ಸಂಪುಟವು ಅನುಮೋದನೆ ನೀಡಿರುವುದು ಸ್ವಾಗತಾರ್ಹ. ಆದರೆ ಗಾಂಧಿ ಸ್ಮರಣೆಯನ್ನು ಗಮನದಲ್ಲಿಟ್ಟುಕೊಂಡು ನಡೆಸುವ ಯಾವುದೇ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡಬಾರದು ಎಂದು ಸರ್ವೊದಯ ಕರ್ನಾಟಕದ ಸದಸ್ಯರು ಆಗ್ರಹಿಸಿದ್ದಾರೆ.

ಬುಧವಾರ ಸರ್ವೊದಯ ಕರ್ನಾಟಕದ ಸದಸ್ಯರಾದ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಾಂಡೊಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಎಸ್.ಜಿ. ಸಿದ್ದರಾಮಯ್ಯ, ಮಹಿಮಾ ಪಟೇಲ್, ನಾಗೇಶ್ ಹೆಗಡೆ, ನಿರಂಜನಾರಾಧ್ಯ. ವಿ.ಪಿ ಸೇರಿ 15 ಮಂದಿ ಮುಖ್ಯಮಂತ್ರ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ. ದುಂದು ವೆಚ್ಚಕ್ಕೆ ಎಡೆಮಾಡಿ ಕೊಡಬಾರದೆಂದು. ಅಂತಹ ದುಬಾರಿವೆಚ್ಚಗಳು ಗಾಂಧಿತತ್ತ್ವದ ಅಣಕವಾಗಿ ಪರಿಣಮಿಸುತ್ತದೆ ಎಂದು ಅವರು ಹೇಳಿದ್ದಾರೆ.

ಗಾಂಧೀಜಿಯವರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಕೊಡುಗೆಯನ್ನು ಸ್ಮರಿಸಲು ಸರಕಾರವು 2 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಮುಂದಾಗಿರುವುದು ಮತ್ತು ‘ಗಾಂಧಿ ಭಾರತ’ ಕಾರ್ಯಕ್ರಮಗಳನ್ನು 25 ಕೋಟಿ ರೂ.ಗಳ ವೆಚ್ಚದಲ್ಲಿ ಆಯೋಜಿಸಲು ಅನುಮೋದನೆ ನೀಡಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ ಎಂದಿದ್ದಾರೆ.

ಜಗತ್ತಿನ ಬೇರೆ ದೇಶಗಳು ಗಾಂಧೀಜಿಯವರ ಅಹಿಂಸೆ, ಸಮಾನತೆ, ಸೌಹಾರ್ದತೆಯ ಮತ್ತು ಸರ್ವೋದಯ ಸಂದೇಶವನ್ನು ಆದರ್ಶವಾಗಿಟ್ಟುಕೊಂಡಿವೆ. ಆದರೆ ನಮ್ಮ ದೇಶದಲ್ಲೇ ಗಾಂಧೀಜಿಯವರನ್ನು ನಿರ್ಲಕ್ಷಿಸುವ ಮತ್ತು ಅವರ ಬಗ್ಗೆ ಅಪಪ್ರಚಾರ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಗಾಂಧಿ ತತ್ವದ ಸರ್ವಧರ್ಮ ಸಮನ್ವಯವನ್ನು ಕದಡಿ ಕೋಮುಶಕ್ತಿಗಳನ್ನು ಪೋಷಿಸಿ, ಜಾತಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಸರಕಾರವು ‘ಗಾಂಧಿ ಭಾರತ’ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಳೆದುಕೊಂಡಿರುವ ಗಾಂಧಿ ತತ್ವಗಳ ಪುನರ್ ಪ್ರತಿಷ್ಠಾನೆಗೆ ಕಾರ್ಯಕ್ರಮ ರೂಪಿಸಿರುವುದು ಸರಕಾರದ ಆರೋಗ್ಯಕರ ಮನಸ್ಥಿತಿಯನ್ನು ಸೂಚಿಸುತ್ತದೆ ಎಂದು ಸರ್ವೊದಯ ಕರ್ನಾಟಕದ ಸದಸ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಗಾಂಧಿ ಭಾರತ’ ಕಾರ್ಯಕ್ರಮಗಳಲ್ಲಿ ಗಾಂಧಿ ಲಾಂಛನವನ್ನು ಕಡ್ಡಾಯವಾಗಿ ಅಳವಡಿಸುವ ಕಾರ್ಯಕ್ರಮವಾಗಲಿ, ಧ್ಯಾನ ಸ್ಥಿತಿಯಲ್ಲಿರುವ ಗಾಂಧೀಜಿಯವರ ಭಾವ ಚಿತ್ರವನ್ನು ವಿವಿಧ ಇಲಾಖೆಗಳಲ್ಲಿ ಶಾಲಾಕಾಲೇಜುಗಳಲ್ಲಿ ಅಳವಡಿಸುವುದಾಗಲಿ ಅಥವಾ ಗಾಂಧೀಜಿಯವರು ಬೋಧಿಸಿದ ಸಪ್ತಪಾತಕಗಳ ಫಲಕವನ್ನು ಪ್ರದರ್ಶಿಸುವುದಾಗಲಿ ಬಹಳ ಒಳ್ಳೆಯ ಕೆಲಸ. ‘ಗಾಂಧಿ ಭಾರತ’ದ ಭಾಗವಾಗಿ ಶಾಲಾ ಶಿಕ್ಷಣದ ನೈತಿಕ ಶಿಕ್ಷಣದ ಅಂಗವಾಗಿ ‘ನಾವುಮನುಜರು’ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನಕ್ಕೆ ತರುವ ಕಾರ್ಯಕ್ರಮವು ಒಳ್ಳೆಯ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದರು.

ಗಾಂಧಿ ಭಾರತ ಕಾರ್ಯಕ್ರಮಕ್ಕೆ 25 ಕೋಟಿ ರೂ.ಗಳು ಮೀಸಲಾಗಿದೆ. ಆದ್ದರಿಂದ ಆಯಾ ಇಲಾಖೆಗಳು ತಮಗೆ ಈಗಾಗಲೇ ಇರುವ ಅನುದಾನಗಳನ್ನು ಉಪಯೋಗಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಬೇಕೆಂದು ಸರಕಾರವು ಆದೇಶಿಸಿರುವುದರಿಂದ ಬಹಳಷ್ಟು ಹಣ ಗಾಂಧಿ ಭಾರತದ ಇತರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮಿಗಿಲುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.

ಗಾಂಧೀಜಿಯನ್ನು ಸ್ಮರಣೆಮಾಡಲು ಯಾವ ಬಗೆಯ ಸ್ಮಾರಕಗಳ ನಿರ್ಮಾಣದ ಅಗತ್ಯವಿಲ್ಲ, ಇದಕ್ಕೆ ಗಾಂಧಿಜಿಯವರ ವಿರೋಧವಿತ್ತು ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ ಗಾಂಧೀಜಿಯವರು ಭೇಟಿ ನೀಡಿದ ಸ್ಥಳಗಳಲ್ಲಿ ಸುಮಾರು 5 ಎಕರೆ ವಿಸ್ತೀರ್ಣದ ಗಾಂಧಿ ವನವನ್ನು ಬೆಳೆಸಬೇಕು. ಈ ವನದಲ್ಲಿ ಸ್ಥಳೀಯ ಜೀವವೈವಿಧ್ಯವನ್ನು ಪೋಷಿಸುವ ಕೆಲಸವಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗಾಂಧಿ ತತ್ವಗಳನ್ನು ಅರ್ಥಪೂರ್ಣವಾಗಿ ನಡೆಸುವ ಎಲ್ಲ ಕಾರ್ಯಕ್ರಮಗಳಿಗೆ ನಮ್ಮ ಪೂರ್ಣ ಬೆಂಬಲವಿದೆ. ಗಾಂಧಿ ಭಾರತ ಕಾರ್ಯಕ್ರಮದ ರೂಪುರೇಶೆಗಳನ್ನು ಸಿದ್ದಪಡಿಸಲು, ಹಿರಿಯ ಗಾಂಧಿವಾದಿಗಳು, ಗಾಂಧಿ ಸ್ಮಾರಕ ನಿಧಿ ಸಂಸ್ಥೆಯ ಪದಾಧಿಕಾರಿಗಳನ್ನು ಚರ್ಚೆಗೆ ಆಹ್ವಾನಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News