ಬೆಂಗಳೂರು | ಅಮಿತ್ ಶಾ ಪ್ರತಿಕೃತಿ ದಹಿಸಿ ದಸಂಸ ಪ್ರತಿಭಟನೆ
ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಪ್ರತಿಕೃತಿ ಹಾಗೂ ಮನುಸ್ಮೃತಿಯನ್ನು ದಹಿಸಿ, ದಲಿತ ಸಂಘರ್ಷ ಸಮಿತಿ ವತಿಯಿಂದ ಮಂಗಳವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಮಿತ್ ಶಾರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಹಾಗೂ ದೇಶದಿಂದ ಅವರನ್ನು ಗಡಿಪಾರು ಮಾಡಬೇಕು ಎಂದು ಬೆಂಗಳೂರು ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಂಬೇಡ್ಕರ್ ಅವರನ್ನು ಅಪಮಾನಿಸಿರುವುದರ ವಿರುದ್ಧ ಇಡೀ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಸಂಸತ್‍ನಲ್ಲಿ ಸಂವಿಧಾನದ ಆಶಯಗಳ ಬಗ್ಗೆ ಮಾತನಾಡುವಾಗ, ಅಮಿತ್ ಶಾರ ವಿಷಪೂರಿತವಾದ ಮಾತುಗಳನ್ನಾಡಿರುವುದು ಖಂಡನಾರ್ಹ ಎಂದು ತಿಳಿಸಿದರು.
ಅಮಿತ್ ಶಾ ಜೈಲಿಗೆ ಹೋಗಿ ಬಂದವರು. ಹಾಗೆಯೇ ಅವರನ್ನು ಗುಜರಾತ್ ಸರಕಾರ ಗಡಿಪಾರು ಮಾಡಿತ್ತು. ಇಂತಹ ವ್ಯಕ್ತಿಯೇ ಈಗ ದೇಶದ ಗೃಹ ಸಚಿವ ಆಗಿರುವುದು ದುರಂತದ ಸಂಗತಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಂವಿಧಾನದ ಬಗ್ಗೆ ನಿಜವಾದ ಗೌರವ ಇದ್ದರೆ, ಕೂಡಲೇ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ದಸಂಸ ಕಾರ್ಯಕರ್ತೆ ಚಂದ್ರಿಕಾ ಮಾತನಾಡಿ, ದೇಶದ ಸಂವಿಧಾನವನ್ನು ಜಾರಿಗೆ ತಂದವರಿಗೆ ಈಗ ಬೆಲೆ ಕೊಡುತ್ತಿಲ್ಲ. ಕೆಂದ್ರದ ಗೃಹ ಸಚಿವರಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ? ನಮಗೆ ಎಲ್ಲಿ ಹಕ್ಕಿದೆ ನ್ಯಾಯ ಎಲ್ಲಿದೆ? ನಾವು ಎಂಥವರಿಗೆ ಮತ ಹಾಕಿದ್ದೇವೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಅಮಿತ್ ಶಾಗೆ ಗೌರವ, ಮರ್ಯಾದೆ ಇದ್ದರೆ ಕೂಡಲೇ ಅವರು ರಾಜೀನಾಮೆ ನೀಡಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಂಚಾಲಕಿ ನಿರ್ಮಲಾ ಮಾತನಾಡಿ, ‘ಅಂಬೇಡ್ಕರ್ ಎಂದರೆ ಒಂದು ವ್ಯಸನ ಅಂತ ಅಮಿತ್ ಶಾ ಹೇಳುತ್ತಾರೆ. ಅವರಿಗೆ ಅಂಬೇಡ್ಕರ್ ಅವರ ಬಗ್ಗೆ ಸಂವಿಧಾನದ ಬಗ್ಗೆ ಏನು ಗೊತ್ತಿದೆ? ʼ ಎಂದು ಪ್ರಶ್ನಿಸಿದರು.