5, 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ | ಕೇಂದ್ರದ ಹೊಸ ನೀತಿಯನ್ನು ತಿರಸ್ಕರಿಸುವಂತೆ ನಿರಂಜನಾರಾಧ್ಯ ವಿ.ಪಿ. ಒತ್ತಾಯ
ಬೆಂಗಳೂರು : ಕೇಂದ್ರ ಸರಕಾರವು ಪಬ್ಲಿಕ್ ಪರೀಕ್ಷೆಯ ಮೂಲಕ ಮಕ್ಕಳನ್ನು 5 ಮತ್ತು 8ನೇ ತರಗತಿಯಲ್ಲಿ ತಡೆಹಿಡಿಯಲು ರೂಪಿಸಿರುವ ಹೊಸ ಶಿಕ್ಷಣ ಹಕ್ಕು ಕಾಯಿದೆಯ ನಿಯಮಗಳನ್ನು ರಾಜ್ಯ ಸರಕಾರ ತಿರಸ್ಕರಿಸಿ ಮಕ್ಕಳ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ. ತಿಳಿಸಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿರುವ ಅವರು, ಯುಪಿಎ ಸರಕಾರ ಜಾರಿಗೆ ತಂದಿದ್ದ ಮಹತ್ವದ ಶಿಕ್ಷಣ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸಿ, ಹೊಸ ಶಿಕ್ಷಣ ಹಕ್ಕು ಕಾಯಿದೆಯ ನಿಯಮಗಳನ್ನು ಕೇಂದ್ರ ಬಿಜೆಪಿ ಸರಕಾರ ಜಾರಿ ಮಾಡಿದೆ. ಅದನ್ನು ರಾಜ್ಯದಲ್ಲಿ ಅನುಷ್ಟಾನ ಮಾಡಬಾರದು ಎಂದಿದ್ದಾರೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಸರಿ ಸುಮಾರು 100 ವರ್ಷಗಳ ಸತತ ಹೋರಾಟದ ಫಲವಾಗಿ, 2009ರಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ತಮ್ಮ ಪಕ್ಷದ ಯುಪಿಎ ಸರಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಮಸೂದೆಯನ್ನು ರೂಪಿಸಿ ಸಂಸತ್ತಿನಲ್ಲಿ ಮಂಡಿಸಿ ರಾಷ್ಟ್ರಪತಿಯವರ ಒಪ್ಪಿಗೆ ಪಡೆಯುವ ಮೂಲಕ ಅದನ್ನು ಮಹತ್ವದ ಕಾಯಿದೆಯನ್ನಾಗಿಸಿದೆ ಎಂದು ಅವರು ವಿವರಿಸಿದ್ದಾರೆ.
ಶಿಕ್ಷಣ ಹಕ್ಕು ಮೂಲ ಕಾಯಿದೆಯ ಪ್ರಕರಣ 16ರ ಅನ್ವಯ, 8ನೆ ತರಗತಿಯನ್ನು ಪೂರ್ಣಗೊಳಿಸುವವರೆಗೆ ಯಾವುದೇ ಮಗುವನ್ನು ಶಾಲೆಯಿಂದ ಹೊರ ಹಾಕುವುದನ್ನು ಮತ್ತು ಒಂದೇ ತರಗತಿಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚುಕಾಲ ತಡೆಹಿಡಿಯುವುದಾಗಲಿ ಅಥವಾ ಅನುತ್ತೀರ್ಣ ಮಾಡುವುದನ್ನು ನಿಷೇಧಿಸಲಾಗಿತ್ತು. ಒಮ್ಮೆ ಶಾಲೆಗೆ ಪ್ರವೇಶ ಪಡೆದ ಯಾವುದೇ ಮಗು ಎಂಟು ವರ್ಷಗಳ ಗುಣಾತ್ಮಕ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಲು ಮೂಲಭೂತ ಹಕ್ಕನ್ನು ಗ್ಯಾರಂಟಿಗೊಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಕಾಯಿದೆ ಪ್ರಕರಣ 29(ಹೆಚ್) ಆಶಯದಂತೆ ಪಠ್ಯಕ್ರಮ ಮತ್ತು ಮೌಲ್ಯಮಾಪನ ನಿಯಮವು ಸಮಗ್ಯ ಮತ್ತು ನಿರಂತರವಾಗಿದ್ದು, ಮಗುವಿನ ಜ್ಞಾನದ ತಿಳುವಳಿಕೆ ಮತ್ತು ಅದನ್ನು ಅನ್ವಯಿಸುವ ಅವನ ಅಥವಾ ಅವಳ ಸಾಮಥ್ರ್ಯವನ್ನು ನಿರಂತರ ಮೌಲ್ಯಮಾಪನ ಮಾಡಬೇಕು ಎಂದು ಹೇಳುತ್ತದೆ ಎಂದು ಅವರು ಹೇಳಿದ್ದಾರೆ.
ಪರೀಕ್ಷೆಗಳನ್ನು ಮಾಡಿ ಮಕ್ಕಳನ್ನು ‘ಫೇಲ್' ಎಂದು ಘೋಷಿಸುವುದು ಮಕ್ಕಳು ಶಾಲೆಯನ್ನು ತೊರೆಯುವ ಅವಕಾಶವನ್ನು ಹೆಚ್ಚಿಸುತ್ತದೆ. ಅವರ ಮನೋಬಲ ಕುಸಿಯುತ್ತದೆ. ಮಕ್ಕಳ ಕಲಿಕೆ, ಕಲಿಕೆಗೆ ನಾವು ಒದಗಿಸುವ ವಾತಾವರಣ, ಶಿಕ್ಷಕರ ಸಾಮಥ್ರ್ಯ, ಶಿಕ್ಷಕರು ಪೂರ್ಣವಾಗಿ ಕಲಿಸಲು ಸಾಧ್ಯವಾಗುವ ಪರಿಸರ ಮತ್ತು ಅವಕಾಶ, ಮಕ್ಕಳ ಮನಸ್ಸನ್ನು ಅರಿತು ಸಂವೇದನಾಶೀಲತೆಯಿಂದ ಕಲಿಸುವ ಮನೋಧರ್ಮ, ಇತ್ಯಾದಿಗಳನ್ನು ಅವಲಂಬಿಸುತ್ತದೆ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಶಿಕ್ಷಕರ ಹುದ್ದೆಗಳನ್ನು ಖಾಲಿ ಇಟ್ಟುಕೊಂಡು, ಮಕ್ಕಳ ಕಲಿಕೆ ಎಲ್ಲಿದೆ ಎಂದು ಪರೀಕ್ಷಿಸಲು ನಮಗಿರುವ ನೈತಿಕತೆಯಾದರು ಏನು ಎಂದು ಅವರು ಪ್ರಶ್ನಿಸಿದ್ದಾರೆ.
ಮಕ್ಕಳ ಕಲಿಕೆಯನ್ನು ನಿರ್ಣಯಿಸುವ ಅತ್ಯುತ್ತಮ ಕಾರ್ಯವಿಧಾನವಾದ ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಶಿಕ್ಷಣ ಹಕ್ಕು ಕಾಯಿದೆ ಭಾಗವಾಗಿ ಜಾರಿಯಲ್ಲಿರುವಾಗ ವರ್ಷದ ಕೊನೆಯಲ್ಲಿ ಮತ್ತೊಂದು ಪರೀಕ್ಷೆ ನಡೆಸುವ ಅವಶ್ಯಕತೆಯಾದರು ಏನು. ನಿರಂತರ ಮತ್ತು ಸಮಗ್ರ ಮೌಲ್ಯಮಾಪನ ಮಗುವನ್ನು ಬೆದರಿಸುವುದಿಲ್ಲ. ಬದಲಿಗೆ ಮಗುವನ್ನು ಭಯ ಮತ್ತು ವೈಫಲ್ಯದ ಆಘಾತದಿಂದ ಬಿಡುಗಡೆ ಮಾಡುತ್ತದೆ, ಮಗುವಿನ ಕಲಿಕೆ ಮತ್ತು ಕಾರ್ಯಕ್ಷಮತೆಗೆ ವೈಯಕ್ತಿಕ ಗಮನವನ್ನು ನೀಡಲು ಶಿಕ್ಷಕರನ್ನು ಶಕ್ತಗೊಳಿಸುತ್ತದೆ. ಇದು ವ್ಯವಸ್ಥೆಯು ಗುಣಮಟ್ಟವನ್ನು ಸುಧಾರಿಸಲು ಉತ್ತಮ ಸಾಮಥ್ರ್ಯವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.
ಈ ಎಲ್ಲ ಅಂಶಗಳನ್ನು ಅರಿತು 5 ಮತ್ತು 8ನೆ ತರಗತಿಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಕೇಂದ್ರ ಸರಕಾರ ರೂಪಿಸಿರುವ ಹೊಸ ನಿಯಮಗಳನ್ನು ತಮ್ಮ ಸರಕಾರ ತಿರಸ್ಕರಿಸಬೇಕು. ಈ ಅವೈಜ್ಞಾನಿಕ ವಾರ್ಷಿಕ ಪರೀಕ್ಷೆಯನ್ನು ಮಕ್ಕಳ ಹಿತದೃಷ್ಟಿಯಿಂದ ಕೈ ಬಿಟ್ಟು, ಶಿಕ್ಷಣ ಹಕ್ಕು ಕಾಯಿದೆಯಲ್ಲಿರುವಂತೆ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸರಕಾರ ಮುಂದಾಗಬೇಕು ಎಂದು ನಿರಂಜನಾರಾಧ್ಯ ವಿ.ಪಿ. ಆಗ್ರಹಿಸಿದ್ದಾರೆ.