ಅಭಿವ್ಯಕ್ತಿ ಸ್ವಾತಂತ್ರ್ಯದ ಆತ್ಮಹತ್ಯೆ ನಡೆಯುತ್ತಿವೆ : ದಿನೇಶ್ ಅಮೀನ್‍ಮಟ್ಟು
ಬೆಂಗಳೂರು: ನಮ್ಮಲ್ಲಿ ಬಹಳಷ್ಟು ಮಂದಿ ಸಾಹಿತಿಗಳು ಇದ್ದಾರೆ, ಇಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಒಂದು ಕಡೆಯಾದರೆ, ಇನ್ನೊಂದು ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಆತ್ಮಹತ್ಯೆಯೂ ಆಗುತ್ತಿದೆ. ಹರಣ ಮತ್ತೊಬ್ಬರು ಮಾಡುವುದು, ಆತ್ಮಹತ್ಯೆ ನಾವೇ ಮಾಡಿಕೊಳ್ಳುವುದು ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್‍ಮಟ್ಟು ಅಭಿಪ್ರಾಯ ಪಟ್ಟಿದ್ದಾರೆ.
ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡಮಿ ವತಿಯಿಂದ ಆಯೋಜಸಿದ್ದ ‘ಸಜ್ಜನರ ಸಲ್ಲಾಪ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿ.ಟಿ.ಲಲಿತಾ ನಾಯಕ್ ಅವರು ಶಾಸಕರು, ಸಚಿವರೂ ಆಗಿದ್ದರು, ಅವರ ರಾಜಕೀಯ ಹಿನ್ನೆಲೆಯನ್ನು ನೋಡಿದರೆ, ಹಲವು ಪಕ್ಷಗಳ ಒಡನಾಟ ಇಟ್ಟುಕೊಂಡಿದ್ದಾರೆ. ಆದರೆ ಬಿಜೆಪಿ ಜತೆ ಒಡನಾಟ ಇಟ್ಟುಕೊಂಡಿಲ್ಲ. ಅದು ಅವರ ಸೈದ್ಧಾಂತಿಕ ಬದ್ಧತೆಯನ್ನು ತೋರಿಸುತ್ತದೆ ಎಂದು ನುಡಿದರು.
ಬಿ.ಟಿ.ಲಲಿತಾ ನಾಯಕ್ ಅವರು ಸಮಕಾಲೀನ ವಿದ್ಯಮಾನ ಯಾವುದೇ ಇರಲಿ, ಅದು ತಪ್ಪು ಎನಿಸಿದಾಗ ದಿಟ್ಟತನದಿಂದ ಖಂಡಿಸುತ್ತಾರೆ. ಅವರು ನಮ್ಮ ನಡುವಿನ ಅಪರೂಪದ ಸಾಮಾಜಿಕ ಹೋರಾಟಗಾರ್ತಿ. ಸತ್ಯ ಹೇಳಲೂ ಇಂದು ಹಲವರು ಭಯಪಡುತ್ತಾರೆ. ಆದರೆ ಇಂತಹ ಕಾಲದಲ್ಲಿ ಬಿ.ಟಿ ಲಲಿತಾ ನಾಯಕ್ ಅಂಥವರು ಬಹಳ ಮುಖ್ಯ ಎಂದು ಅವರು ತಿಳಿಸಿದರು.
ಬೀದಿಗೆ ಬಂದು ಯಾರು ಹೋರಾಟ ಮಾಡಿದ್ದಾರೆ, ಅಂತವರಿಗೆ ಮಾತ್ರ ವಿಧಾನಸೌಧದಲ್ಲಿ ಹೋಗುವ ಅರ್ಹತೆ ಇರಬೇಕು, ಇರುತ್ತದೆ. ಬಿ.ಟಿ.ಲಲಿತಾ ನಾಯಕ್ ಅವರೂ ಯಾವುದೇ ಹೋರಾಟವಾದರೂ ಭಾಗವಹಿಸುತ್ತಾರೆ. ಈ ರೀತಿಯವರು ಬೆರಳೆಣಿಕೆಯಷ್ಟು ಜನ ಮಾತ್ರ ನಮ್ಮಲ್ಲಿ ಇದ್ದಾರೆ. ಸಿ.ಟಿ.ರವಿ ಪ್ರಕರಣ ಆಯ್ತು ಯಾರಾದರೂ ಪ್ರತಿಭಟನೆಗೆ ಕರೆದರೆ ಹೋಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಲ್ಲಿ ಹಿಂಜರಿಯುವುದಿಲ್ಲ ಎಂದು ತಿಳಿಸಿದರು.
ಜಾತಿ ಎನ್ನುವುದು ಸಮಾಜದ ವಾಸ್ತವ, ಅದು ಒಂದು ರೋಗ. ಮೊದಲು ಜಾತಿ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ನಂತರ ಜಾತಿ ವಿನಾಶಕ್ಕೆ ಪ್ರಯತ್ನ ಮಾಡಬೇಕು. ಜಾತಿವಿನಾಶ ಆಗಬೇಕಾದರೆ, ಆರ್ಥಿಕ, ಸಾಮಾಜಿ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಬೆಳೆದು ಸಮಾನ ಸ್ಥಿತಿಗೆ ಬಂದ ನಂತರ ಯೋಚನೆ ಮಾಡಬೇಕು ಎಂದರು.
ಇದೇ ವೇಳೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸುರೇಶ್ ಕಾತರಪ್ಪ ಲಮಾಣಿ, ತಂಬೂರಿ ಉಮಾ ನಾಯಕ್, ರುಕ್ಮಿಣಿ ಬಾಯಿ ಅವರಿಗೆ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡಮಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ, ಸದಸ್ಯ ಸಂಚಾಲಕ ಉತ್ತಮ್ ಕೆ.ಎಚ್, ಮತ್ತಿತರರು ಉಪಸ್ಥಿತರಿದ್ದರು.