ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಹೆಸರು ಹೇಳುವ ನೈತಿಕ ಹಕ್ಕೇ ಇಲ್ಲ : ಡಾ.ಪಿ.ಸುಧಾಕರ ರೆಡ್ಡಿ

Update: 2024-12-24 12:39 GMT

ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ. ಪಂಚ ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸಿಲ್ಲ. ಅಧಿಕೃತ ಮತ್ತು ಅನಧಿಕೃತ ತೆರಿಗೆ ಹೇರುತ್ತಿದ್ದಾರೆ. ಅಂಬೇಡ್ಕರ್‌ರನ್ನು ನಿರಂತರವಾಗಿ ಅಪಮಾನ ಮಾಡಿದ್ದ ಕಾಂಗ್ರೆಸ್ಸಿಗರಿಗೆ ಅವರ ಹೆಸರು ಹೇಳುವ ನೈತಿಕ ಹಕ್ಕೇ ಇಲ್ಲ ಎಂದು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಡಾ.ಪಿ.ಸುಧಾಕರ ರೆಡ್ಡಿ ಅವರು ಹೇಳಿದರು.

ಮಲ್ಲೇಶ್ವರದ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸೋಲಿನ ನಂತರ ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದಾರೆ. ಡಾ.ಅಂಬೇಡ್ಕರ್‌ ರನ್ನು ಲೋಕಸಭಾ ಚುನಾವಣೆಯಲ್ಲಿ 2 ಬಾರಿ ಸೋಲಿಸಿ ಅವಮಾನಿಸಿದ್ದ ಕಾಂಗ್ರೆಸ್ ಪಕ್ಷವು ಇದೀಗ ತಮ್ಮ ನಾಯಕರನ್ನು ಉಳಿಸಿಕೊಳ್ಳಲು ಅದೇ ಬಾಬಾಸಾಹೇಬರ ಹೆಸರನ್ನು ಬಳಸಿಕೊಳ್ಳುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ದೇಶ ವಿಭಜಿಸುವುದನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ವಿರೋಧಿಸಿದ್ದರು. 370ನೇ ವಿಧಿ ಹೇರುವುದನ್ನೂ ಅವರು ವಿರೋಧಿಸಿದ್ದರು. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷವು ದೇಶವನ್ನೇ ಜೈಲಾಗಿ ಪರಿವರ್ತಿಸಿತ್ತು ಎಂದು ಟೀಕಿಸಿದರು. ಈಗ ಕಾಂಗ್ರೆಸ್ ಮುಖಂಡರು ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಅಮಿತ್ ಶಾ ಅವರ ಮೇಲೆ ಕೆಸರೆರಚುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿದೆ. ಆದರೆ, ಜನರು ಮತ್ತು ದೇಶದ ಜನತೆ ಮೋದಿಜೀ ಮತ್ತು ಅಮಿತ್ ಶಾ ಅವರ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂದು ನುಡಿದರು. ಡಾ.ಅಂಬೇಡ್ಕರ್‌ ಹೆಸರಿನಿಂದ ಮತ್ತೆ ರಾಜಕಾರಣ ಮಾಡಲು ಕಾಂಗ್ರೆಸ್ ಮುಂದಾಗಿದೆ. ಆದರೆ, ಜನರಿಗೆ ಕಾಂಗ್ರೆಸ್ಸಿಗರ ನೈಜ ಬಣ್ಣ ತಿಳಿದಿದೆ. ಕಾಂಗ್ರೆಸ್ಸಿಗರ ತಪ್ಪು ನೀತಿಗಳನ್ನು ಅಮಿತ್ ಶಾ ಅವರು ಜನರ ಮುಂದೆ ಅನಾವರಣಗೊಳಿಸಿದ್ದಾರೆ. ಮೋದಿ ಜೀ ಅವರು ಸ್ವಾವಲಂಬಿ, ಆತ್ಮನಿರ್ಭರ ಭಾರತ ಮಾಡುವ ನಿಟ್ಟಿನಲ್ಲಿ ನಿರಂತರ ಶ್ರಮಿಸುತ್ತಿದ್ದಾರೆ ಎಂದು ವಿವರಿಸಿದರು.

ಬಡ ಕುಟುಂಬದಿಂದ ಬಂದ ವ್ಯಕ್ತಿ 10 ವರ್ಷಕ್ಕೂ ಹೆಚ್ಚು ಕಾಲ ಪ್ರಧಾನಿ ಆಗಿ ಇರುವುದನ್ನು ಕಾಂಗ್ರೆಸ್ಸಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ, ರಾಹುಲ್ ಗಾಂಧಿಯವರು ತಮ್ಮದೇ ಯುಪಿಎ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಅವಮಾನಿಸಿದ ವ್ಯಕ್ತಿ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News