ಚಿಕ್ಕಮಗಳೂರು ಬಂದ್ ವೇಳೆ ಸಾರ್ವಜನಿಕರಿಗೆ ಬೆದರಿಕೆ : ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಜಿಗೆ ದೂರು
ಬೆಂಗಳೂರು : ಸಿಟಿ ರವಿ ಬೆಂಬಲಿಸಿ ಇತ್ತೀಚಿಗೆ ನಡೆದ ಚಿಕ್ಕಮಗಳೂರು ಬಂದ್ ವೇಳೆ ಬಿಜೆಪಿ ನಾಯಕರು, ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಮಳಿಗೆಗಳನ್ನು ಮುಚ್ಚಿ ಸಾರ್ವಜನಿಕರಿಗೆ ನೇರವಾಗಿ ಬೆದರಿಕೆವೊಡ್ಡಿದ್ದು, ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿ ಕಾಂಗ್ರೆಸ್ ಒತ್ತಾಯಿಸಿದರು.
ಸೋಮವಾರ ಇಲ್ಲಿನ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದ ನಿಯೋಗವೂ ದೂರು ಸಲ್ಲಿಸಿದ್ದು, ವಿಡಿಯೊ ಆಧಾರದಡಿ ತಪ್ಪಿತಸ್ಥ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇನ್ನೂ, ಸಿ.ಟಿ.ರವಿ ನೀಡುತ್ತಿರುವ ಗೊಂದಲಕಾರಿ ಹೇಳಿಕೆಗಳಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆಗೆ ಧಕ್ಕೆ ಉಂಟಾಗುತ್ತಿದೆ ಹಾಗೂ ಪೊಲೀಸ್ ಇಲಾಖೆ ಮೇಲೆ ಸುಳ್ಳು ಆರೋಪಗಳನ್ನು ವಹಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ಹೇಳಿಕೆಗಳ ಮಾಹಿತಿಯನ್ನು ಸಂಗ್ರಹಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಮನವಿ ಮಾಡಿದರು.
ಪ್ರಮುಖವಾಗಿ ಸಿ.ಟಿ.ರವಿ ಅವರನ್ನು ಎನ್‍ಕೌಂಟರ್ ಮಾಡಲು ಸಂಚುರೂಪಿಸಿದ್ದಾರೆ ಪೊಲೀಸರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಿದ್ದು, ಇದರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿದರು.