ಅಪರಾಧ ಹಿನ್ನೆಲೆಯ ಗೃಹ ಸಚಿವರಿರುವುದು ದೇಶದ ದುರಂತ : ಡಾ.ಸಿ.ಎಸ್.ದ್ವಾರಕನಾಥ್
ಬೆಂಗಳೂರು : ‘ಅಪರಾಧ ಹಿನ್ನಲೆ ಇರುವ ಅಮಿತ್ ಶಾ ನಮ್ಮ ದೇಶದ ಗೃಹ ಸಚಿವರಾಗಿರುವುದು, ದೇಶದ ದುರಂತ. ಭಾರತದ ಅತ್ಯಂತ ಕೆಟ್ಟ ಕಾಲಘಟ್ಟದಲ್ಲಿ ನಾವು ಇದ್ದೇವೆ’ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ, ಹಿರಿಯ ವಕೀಲ ಡಾ.ಸಿ.ಎಸ್.ದ್ವಾರಕನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗ, ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಮ್, ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಸಹಯೋಗದೊಂದಿಗೆ, ಅಂಬೇಡ್ಕರ್ ವಿರುದ್ಧ ಹೇಳಿಕೆ ನೀಡಿರುವ ಅಮಿತ್ ಶಾ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಿ.ಟಿ.ರವಿ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ವಿಶೇಷ ಏನೆಂದರೆ, ಅಪರಾಧಿ ಹಿನ್ನೆಲೆಯಿಂದ ಬಂದವರು. ಗುಜರಾತ್ ಹತ್ಯಾಕಾಂಡದಲ್ಲೂ ಅಮಿತ್ ಶಾ ಹೆಸರಿದೆ. ಈ ರೀತಿಯ ಹಿನ್ನೆಲೆ ಇರುವ ಅಮಿತ್ ಶಾ, ಅಂಬೇಡ್ಕರ್ ಅವರನ್ನು ಯಾವ ರೀತಿ ಒಪ್ಪಿಕೊಳ್ಳಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾನತೆ, ಶಾಂತಿ, ಮನುಷ್ಯತ್ವನ್ನು ಬೋಧಿಸಿರುವ ಅಂಬೇಡ್ಕರ್ ರನ್ನು ಅಮಿತ್ ಶಾ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತದಲ್ಲಿ ಅಂಬೇಡ್ಕರ್ ಅವರನ್ನು ಸಂಘ ಪರಿವಾರವಾಗಲಿ, ಅಮಿತ್ ಶಾ ಆಗಲಿ ಎಲ್ಲರೂ ವಿರೋಧಿಸಿಕೊಂಡು ಬಂದಿದ್ದರು. ಯಾಕೆಂದರೆ ಸಂವಿಧಾನ ಮನು ಧರ್ಮಶಾಸ್ತ್ರಕ್ಕೆ ವಿರೋಧವಾಗಿದೆ ಎಂದು ಅವರು ತಿಳಿಸಿದರು.
ಮನು ಧರ್ಮಶಾಸ್ತ್ರದಲ್ಲಿ ಕೇವಲ ಅಸಮಾನತೆ ಮಾತ್ರ ಇದೆ. ಅಸಮಾನತೆ ವಿರುದ್ಧ ಬಾಬಾ ಸಾಹೇಬರು ದ್ವನಿ ಎತ್ತಿದ್ದರು. ಅದಕ್ಕಾಗಿ ಸಸತವಾಗಿ ಅಂಬೇಡ್ಕರ್ ರನ್ನು ವಿರೋಧ ಮಾಡುತ್ತಲೇ ಇದೆ. ಹಿಂದೆ ಸಂಘ ಪರಿವಾರದ ನಾಯಕರೊಬ್ಬರು ಅಂಬೇಡ್ಕರ್ ಗೆ ಸಹಾಯ ಮಾಡುವುದು ಎಂದರೆ ಹಾವಿಗೆ ಹಾಲೆರೆದಂತೆ ಎಂದು ಹೇಳಿದ್ದರು. ಆರೆಸ್ಸೆಸ್ ಕಚೇರಿ ಮೇಲೆ 2021ರ ವರೆಗೆ ದೇಶದ ಬಾವುಟವನ್ನು ಹಾಕಿರಲಿಲ್ಲ. ಬಾವುಟ, ಸಂವಿಧಾನವನ್ನು ವಿರೋಧಿಸಿದ ಅವರಿಗೆ ಸಮಾನತೆ, ಸಹಬಾಳ್ವೆ, ಜಾತ್ಯತೀತತೆ ಬಗ್ಗೆ ಯಾವುದೇ ನಂಬಿಕೆ ಇಲ್ಲ ಎಂದು ದ್ವಾರಕನಾಥ್ ಹೇಳಿದರು.
ಆರೆಸ್ಸೆಸ್‍ನವರಿಗೆ ಅಸಮಾನತೆ, ಕೊಲೆಗಡಕುತನವನ್ನು, ಅಲ್ಪಸಂಖ್ಯಾತ, ಆದಿವಾಸಿ, ಅಸ್ಪೃಶ್ಯ ಸಮುದಾಯಗಳ ಮೇಲೆ ಹಲ್ಲೆ ಮಾಡುವುದೇ, ಅವರು ನಂಬಿದ ಸಂವಿಧಾನವಾಗಿದೆ. ಅಂಬೇಡ್ಕರ್ ಹೆಸರು ಹೇಳುವ ಬದಲು, ದೇವರ ಹೆಸರು ಹೇಳಿದರೆ ಸ್ವರ್ಗಕೆ ಹೋಗುತ್ತೀರಿ ಎಂದು ಕೇಂದ್ರ ಗೃಹ ಸವಚಿವ ಅಮಿತ್ ಶಾ ಸಂಸತ್‍ನಲ್ಲಿ, ಹೇಳಿದ್ದಾರೆ. ನಾವು ಯಾರು ದೇವರನ್ನು ನೋಡಿಲ್ಲ. ಸ್ವರ್ಗದ ಪರಿಕಲ್ಪನೆ ಗೊತ್ತಿಲ್ಲ. ನಮಗೆ ಗೊತ್ತಿರುವುದು, ಡಾ.ಬಾಬಾ ಸಾಹೇಬರು ಕೊಟ್ಟ ಸಂವಿಧಾನದಲ್ಲಿ ನಮ್ಮೆಲ್ಲ ಪರಿಹಾರಗಳು ಇವೆ. ಸಮಾನತೆ, ಹಕ್ಕುಗಳ ಬಗ್ಗೆ ಮಾತಾಡುತ್ತದೆ ಎಂದು ಅವರು ತಿಳಿಸಿದರು.
ನಮ್ಮ ಸಂವಿಧಾನ ಯೇಸು, ಮುಹಮ್ಮದ್ ಪೈಗಂಬರ್, ಗಾಂಧಿಜಿ, ಜ್ಯೋತಿ ಬಾಫುಲೆ, ಸಾವಿತ್ರಿ ಬಾಫುಲೆ, ಶಾಹು ಮಹಾರಾಜ, ಪೆರಿಯಾರ್ ಅವರು ಏನು ಹೇಳಿದ್ದರೋ ಅವೆಲ್ಲ ಆಶಯವನ್ನು ಒಳಗೊಂಡಿದೆ. ಆರೆಸ್ಸೆಸ್ ಇವೆಲ್ಲವನ್ನೂ ವಿರೋಧಿಸುತ್ತ ಬಂದಿದೆ ಎಂದು ಕಿಡಿಕಾರಿದರು. ಇದೇ ವೇಳೆ ಅಮಿತ್ ಶಾ ಮತ್ತು ಸಿ.ಟಿ.ರವಿ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಮ್ ಅಧ್ಯಕ್ಷ ಅಂಥೋಣಿ ವಿಕ್ರಮ್, ವಕೀಲ ನಾಗರಾಜ್, ವಿನೋದ್ ಜೋಸೆಪ್, ಎನ್.ಗೋಪಿ ಮತ್ತಿತರರು ಹಾಜರಿದ್ದರು.