ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ಖಂಡನೀಯ : ಸಂತೋಷ್ ಲಾಡ್
ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಕುರಿತು ಹಗುರವಾಗಿ ಮಾತನಾಡಿದ್ದಾರೆ. ಅದನ್ನು ಖಂಡಿಸುತ್ತೇನೆ. ಅಮಿತ್ ಶಾ, ನರೇಂದ್ರ ಮೋದಿ ಅವರೇ ಸುಳ್ಳು ಹೇಳುವುದು ಸಾಕು ನಿಲ್ಲಿಸಿ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ‘ಅಂಬೇಡ್ಕ ರೈಟ್ ಯೂತ್ ಫೆಡರೇಷನ್’ ವತಿಯಿಂದ ರಾಜ್ಯಮಟ್ಟದ ಅಂಬೇಡ್ಕ ರೈಟ್ ಯೂತ್ ಕಾನ್ಫಿರೆನ್ಸ್‌ನಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ವ್ಯವಸ್ಥಿತವಾಗಿ ಎಸ್ಸಿ, ಎಸ್ಟಿ ಜನರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಅಂಬೇಡ್ಕರ್ ಅವರನ್ನು ವಿರೋಧಿಸುವವರು ಇದೇ ರೀತಿಯಾಗಿ ಹೇಳಿ ಯುವಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಹಿಂದೂ ಸಮಾಜ ಮತ್ತು ಆರೆಸ್ಸೆಸ್‍ನವರು ಅಂಬೇಡ್ಕರ್ ಎಸ್ಸಿ, ಎಸ್ಟಿ ಜನಾಂಗಕ್ಕೆ ಮಾತ್ರ ಸಹಾಯ ಮಾಡಿದ್ದಾರೆ ಎಂದು ಹೇಳುತ್ತಾರೆ. ನಾವು ಕೂಡ ಅಂಬೇಡ್ಕರ್ ಅವರನ್ನು ಕೇವಲ ಸಂವಿಧಾನಕ್ಕೆ ಸೀಮಿತಗೊಳಿಸಿದ್ದೇವೆ. ಅದರ ಒಳಗೆ ಹೋಗುತ್ತಿಲ್ಲ. ದೇಶದಲ್ಲಿ 140 ಕೋಟಿ ಜನರಿಗೆ ಸಮಾನವಾಗಿ ಅಧಿಕಾರ ಮತ್ತು ಗೌರವ ಸಿಕ್ಕಿರುವುದು ಅಂಬೇಡ್ಕರ್ ಅವರಿಂದ ಎಂದು ಹೇಳಿದರು.
ದೇಶದ ಎಲ್ಲ ಮಹಿಳೆಯರಿಗೆ, ಪ್ರಧಾನಿ ಮೋದಿ, ಅಮಿತ್ ಶಾ ಅವರೇ ನಿಮ್ಮ ತಂಗಿ, ಹೆಂಡತಿ, ತಾಯಿಗೆ ಆಸ್ತಿಯಲ್ಲಿ ಪಾಲು ಸಿಗುತ್ತಿದ್ದರೆ, ಅದನ್ನು ನೀಡಿರುವುದು ಡಾ.ಅಂಬೇಡ್ಕರ್ ಅವರು. ದಿನ ಬೆಳಗ್ಗೆಯಾದರೆ ಹಿಂದೂ ಹಿಂದೂ ಎನ್ನುತ್ತೀರಿ, ಆದರೆ ಪ್ರತಿಯೊಬ್ಬರೂ ನಿಮ್ಮ ಮನೆಯಲ್ಲಿ ಅಂಬೇಡ್ಕರ್ ಫೋಟೊ ಹಾಕಿಕೊಳ್ಳಬೇಕು. ಹಿಂದೂಪರ ಸಂಘಟನೆಗಳು ದೊಡ್ಡ ದೊಡ್ಡ ಭಾಷಣ ಮಾಡುತ್ತವೆ. ಇದೇ ಆರೆಸ್ಸೆಸ್ ನವರು ಹಿಂದೂ ಕೋಡ್ ಬಿಲ್ಲನ್ನು ವಿರೋಧಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಮಹಿಳೆಯರಿಗೆ ಮೂಲೆಯಲ್ಲಿ ಕೂರಿಸಿದ್ದರು, ಅಂಬೇಡ್ಕರ್ ಅವರಿಂದ ಎಲ್ಲವೂ ಬದಲಾಗಿದೆ. ಅಂಬೇಡ್ಕರ್ ದೇಶದ ಮಹಿಳೆಯರಿಗೆ ನೀಡಿದ ಕೊಡುಗೆಯಷ್ಟು ಪ್ರಪಂಚದ ಯಾವ ನಾಯಕರೂ ನೀಡಿಲ್ಲ ಎಂದು ಅಭಿಪ್ರಾಯಪಟ್ಟರು.
ಚಿಂತಕ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಕೆಲವರು ಆಗಾಗ ಸಂವಿಧಾನವನ್ನು ತೆಗೆದು ದೇಶದಲ್ಲಿ ಮನುಸ್ಮೃತಿಯನ್ನು ತರುತ್ತೇವೆ ಎಂದು ಮಾತಾಡುತ್ತಾರೆ. ನಮ್ಮ ಜನ ಸುಮ್ಮನೆ ಇದ್ದಾರೆ. ಬಾಬಾ ಸಾಹೇಬರು ಇಡೀ ಪ್ರಪಂಚ ಕಂಡ ಅತ್ಯಂತ ದೊಡ್ಡ ವಿದ್ವಾಂಸರು. ನಮ್ಮ ದೇಶದಲ್ಲಿ ಜಾತಿ ಕಾಣುತ್ತದೆ ಹೊರತು ಜ್ಞಾನ ಕಾಣುವುದಿಲ್ಲ. ಅಂಬೇಡ್ಕರ್ ಅವರ ಜ್ಞಾನವನ್ನು ದೇಶದ ಜನ ಗುರುತಿಸಿಲ್ಲ. ಅಷ್ಟರ ಮಟ್ಟಿಗೆ ಜನರು ಜಾತಿವಾದಿಗಳಾಗಿದ್ದಾರೆ ಎಂದು ತಿಳಿಸಿದರು.
ಅಂಬೇಡ್ಕರ್ ಅವರಿಗೆ ಗೊತ್ತಿಲ್ಲದ ವಿಷಯವೇ ಇರಲಿಲ್ಲ. ಎಲ್ಲ ಮತವನ್ನು ಅಧ್ಯಯನ ಮಾಡಿದ್ದರು. ಬುದ್ಧ, ಅಶೋಕರನ್ನು ಒಂದು ಸಾವಿರ ವರ್ಷಗಳ ಕಾಲ ದೇಶದ ಇತಿಹಾಸದಿಂದ ತೆಗೆದುಹಾಕಲಾಗಿತ್ತು. ನಾವು ತಾರತಮ್ಯದ ವಿರೋಧಿಗಳು. ಬಾಬಾ ಸಾಹೇಬರು 131 ಸ್ಮೃತಿ ಗ್ರಂಥಗಳನ್ನು ಲೆಕ್ಕ ಮಾಡಿದ್ದಾರೆ, ಅವೆಲ್ಲವೂ ಅಸಮಾನತೆಯಿಂದ ಕೂಡಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ನಟ ಅಶೋಕ್, ಡಾ.ಕೆ.ಎಸ್.ಹನುಮಂತಯ್ಯ, ಕರ್ನಾಟಕ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ.ಮಹೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಜಿ.ಪಿ.ದೇವರಾಜ್, ಬಹುಜನ ಚಳವಳಿಯ ಎಂ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.