ಬೆಂಗಳೂರು: ವೇವ್ಸ್ ವಿಎಫ್‌ಎಕ್ಸ್ ಚಾಲೆಂಜ್ ನಲ್ಲಿ ದಕ್ಷಿಣ ವಲಯದ ಅಂತಿಮ ಸ್ಪರ್ಧಿಗಳ ಆಯ್ಕೆ

ಬೆಂಗಳೂರು: ಅನಿಮೇಷನ್ ಇಂಡಸ್ಟ್ರಿ ಅಸೋಸಿಯೇಷನ್ (ಎಬಿಎಐ) ಇಂದು ಬೆಂಗಳೂರಿನಲ್ಲಿ ವೇವ್ಸ್ ವಿಎಫ್‌ಎಕ್ಸ್ ಚಾಲೆಂಜ್ ನ ದಕ್ಷಿಣ ವಲಯದ ಸ್ಪರ್ಧೆಯನ್ನು ಆಯೋಜಿಸಿತು. ಮುಂದಿನ ತಿಂಗಳು ಮುಂಬೈನಲ್ಲಿ ನಡೆಯಲಿರುವ ವೇವ್ಸ್ ಶೃಂಗಸಭೆಯಲ್ಲಿ ನಡೆಯಲಿರುವ ರಾಷ್ಟ್ರೀಯ ಫೈನಲ್ ನಲ್ಲಿ ಸ್ಪರ್ಧಿಸಲು ಈ ವಲಯದ ಉನ್ನತ ಪ್ರತಿಭೆಗಳನ್ನು ಗುರುತಿಸುವುದು ದಿನವಿಡೀ ನಡೆದ ಈ ಮ್ಯಾರಥಾನ್ ಸ್ಪರ್ಧೆಯ ಗುರಿಯಾಗಿತ್ತು.
ವೇವ್ಸ್ ವಿಎಫ್‌ಎಕ್ಸ್ ಚಾಲೆಂಜ್ ಗೆ ದಕ್ಷಿಣ ವಲಯದಿಂದ ಆಯ್ಕೆಯಾದ ಅಂತಿಮ ಸ್ಪರ್ಧಿಗಳು:
ವಿದ್ಯಾರ್ಥಿ ವಿಭಾಗ
ವಿಜೇತರು - ಸೌಮ್ಯ ದಾಸ್
ರನ್ನರ್-ಅಪ್ - ಗಗನ್ ಎಚ್.ಪಿ.
ವೃತ್ತಿಪರರ ವಿಭಾಗ
ವಿಜೇತರು - ಮೊಹಮ್ಮದ್ ಜಾವೀದ್
ರನ್ನರ್-ಅಪ್ – ಎಸ್. ಸಾಯಿ ಚಂದನ್
ಉತ್ಸಾಹಿಗಳ ವಿಭಾಗ
ವಿಜೇತರು - ಗಗನ್ ಅಜಯ್
1,500 ಕ್ಕೂ ಹೆಚ್ಚು ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ವಿಎಫ್‌ಎಕ್ಸ್ ಉತ್ಸಾಹಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಲ್ಲವೂ 'ಸೂಪರ್ ಹೀರೋ ಪವರ್' ಎಂಬ ಥೀಮ್ ಅನ್ನು ಆಧರಿಸಿದ್ದವು. ಇವುಗಳಲ್ಲಿ ಆಯ್ಕೆಯಾದ ಅಂತಿಮ 14 ಸ್ಪರ್ದಿಗಳನ್ನು ಆಯ್ಕೆ ಮಾಡಲಾಯಿತು. ಪ್ರತಿ ವಿಭಾಗದಲ್ಲಿ ಒಬ್ಬ ವಿಜೇತ ಮತ್ತು ಒಬ್ಬ ರನ್ನರ್ ಅಪ್ ಮುಂಬೈನಲ್ಲಿ ಅಂತಿಮ ಸುತ್ತಿನಲ್ಲಿ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಾರೆ.
ಸ್ಪರ್ಧಿಗಳ ಉತ್ಸಾಹಭರಿತ ಭಾಗವಹಿಸುವಿಕೆಗೆ ಹರ್ಷ ವ್ಯಕ್ತಪಡಿಸಿದ ಎಬಿಎಐ ಕಾರ್ಯದರ್ಶಿ ಆರ್.ಕೆ. ಚಂದ್, ಸಿನಿಮಾ, ಜಾಹೀರಾತು ಕ್ಷೇತ್ರದ ದಿಗ್ಗಜರು ಮತ್ತು ಸೃಜನಶೀಲ ವೃತ್ತಿಪರರನ್ನು ಒಟ್ಟುಗೂಡಿಸುವ ಮುಂಬೈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉದ್ಯಮದ ಎಲ್ಲಾ ಪಾಲುದಾರರನ್ನು ಆಹ್ವಾನಿಸಿದರು. ಇತ್ತೀಚೆಗೆ ಬೆಂಗಳೂರಿನಲ್ಲಿ ವೇವ್ಸ್ ಚಾಲೆಂಜ್ ಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಚಾಲನೆ ನೀಡಿದ್ದನ್ನು ಅವರು ಸ್ಮರಿಸಿದರು. ಈ ಕಾರ್ಯಕ್ರಮವನ್ನು ಸ್ಪರ್ಧೆಯ ಪ್ರಾದೇಶಿಕ ಪಾಲುದಾರ ಜೈನ್ ವಿಶ್ವವಿದ್ಯಾಲಯದ ಸೃಜನಶೀಲ ವಿನ್ಯಾಸ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಸಾಗರ್ ಗುಲಾಟಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.
ಇಂದು ಉದ್ಯಮ ನೇತೃತ್ವದ ಎರಡು ಪ್ರಮುಖ ಅಧಿವೇಶನಗಳನ್ನು ಆಯೋಜಿಸಲಾಗಿತ್ತು. ಜಾಗತಿಕವಾಗಿ ಪ್ರಸಿದ್ಧವಾದ ವಿಎಫ್‌ಎಕ್ಸ್ ಕಂಪನಿ ಎಂಪಿಸಿಯ ವಿಜಯ್ ಸೆಲ್ವಂ ಅವರು "ಕಾನ್ಸೆಪ್ಟ್ ರಿಯಾಲಿಟಿ" ಕುರಿತು ಮಾಸ್ಟರ್ ಕ್ಲಾಸ್ ಅನ್ನು ನಡೆಸಿಕೊಟ್ಟರು, ಇದು ಬೆಳಕು, ಅನಿಮೇಷನ್ ಮತ್ತು ಪರಿಣಾಮಗಳು, ಸಂಯೋಜನೆ ಮತ್ತು ಫೋಟೊರಿಯಲಿಸಂನಂತಹ ವಿಷಯಗಳನ್ನು ಒಳಗೊಂಡಿತು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದಾತ್ಮಕ ಪ್ರಶ್ನೋತ್ತರ ಅವಧಿ ನಡೆಯಿತು.
ಮತ್ತೊಂದು ಅಧಿವೇಶನದಲ್ಲಿ, ದಿ ಮಿಲ್ ನ ಮುಖ್ಯಸ್ಥ ಹೆಚ್ ರಾಕೇಶ್ ಅವರು ಜಾಹೀರಾತು ಉದ್ಯಮದಲ್ಲಿ ದೃಶ್ಯ ಪರಿಣಾಮಗಳ ಅನ್ವಯದ ಕುರಿತು ಒಳನೋಟಗಳನ್ನು ಹಂಚಿಕೊಂಡರು. ತಾಂತ್ರಿಕ ಅವಧಿಗಳಲ್ಲಿ ಸುಮಾರು 100 ವಿದ್ಯಾರ್ಥಿಗಳು ಭಾಗವಹಿಸಿದ್ದರು.

