ಬೆಂಗಳೂರು: ಮೈಸೂರು ಬ್ಯಾಂಕ್ ವೃತ್ತಕ್ಕೆ ‘ಹುತಾತ್ಮರ ಚೌಕ’ ಎಂದು ಮರು ನಾಮಕರಣಕ್ಕೆ ಒತ್ತಾಯ

Update: 2025-04-11 21:42 IST
  • whatsapp icon

ಬೆಂಗಳೂರು: ನಗರದಲ್ಲಿರುವ ಮೈಸೂರು ಬ್ಯಾಂಕ್ ವೃತ್ತಕ್ಕೆ ಸ್ವಾತಂತ್ರ್ಯ ವೀರರ ಚೌಕ ಅಥವಾ ಹುತಾತ್ಮರ ಚೌಕ ಎಂದು ಮರುನಾಮಕರಣ ಮಾಡಬೇಕು ಎಂದು ‘ನೈಜ ಹೋರಾಟಗಾರರ ವೇದಿಕೆ’ಯ ಸಂಚಾಲಕ ಎಚ್.ಎಂ.ವೆಂಕಟೇಶ್, ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಅವರು, ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಹುತಾತ್ಮ ಯೋಧರ ಸ್ಮಾರಕದ ಉಳಿವಿಗಾಗಿ ಈ ಹಿಂದೆ ಪತ್ರವನ್ನು ಬರೆಯಲಾಗಿತ್ತು. ಆದರೆ ಸರಕಾರ ಯಾವುದೇ ರೀತಿಯ ಕಾನೂನು ಕ್ರಮಗಳನ್ನು ಕೈಗೊಳ್ಳಲಿಲ್ಲ. ಈ ಹುತಾತ್ಮರ ಸ್ಮಾರಕವನ್ನು ಶನಿ ಮಹಾತ್ಮ ದೇವಸ್ಥಾನದ ಸಂಬಂಧಪಟ್ಟವರು ಆಕ್ರಮಿಸಿಕೊಂಡು ಈಗ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಶನಿ ಮಹಾತ್ಮ ದೇವಸ್ಥಾನದ ಸಂಬಂಧಪಟ್ಟವರು ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಬಿಬಿಎಂಪಿ ಅನುಮತಿ ಮತ್ತು ನಕ್ಷೆ ಮಂಜೂರಾತಿ ನೀಡಿದೆಯೇ ಎಂಬುದರ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಷ್ಟನೆ ಕೊಡಬೇಕು. ಜಂಟಿ ಸರ್ವೆಯನ್ನು ಮಾಡಿರುವ ದಾಖಲಾತಿಗಳನ್ನು ಕೊಡಲು ಬಿಬಿಎಂಪಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಪ್ರಶ್ನಿಸಿ ಮಾಹಿತಿ ಆಯೋಗದಲ್ಲಿಯೂ ಬಿಬಿಎಂಪಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರಸಭೆ 1972ರಲ್ಲಿ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಸ್ಥಾಪಿಸಿದ ಹುತಾತ್ಮರ ಸ್ಮಾರಕ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಕ್ಕಿ ಕಣ್ಮರೆಯಾಗುತ್ತಿದೆ. ಈ ಸ್ಮಾರಕದ ಸ್ಥಳದಲ್ಲಿಯೇ ವಿದ್ಯಾರ್ಥಿಗಳು ಆಂಗ್ಲರ ಬಂದೂಕಿಗೆ ಎದೆಯೊಡ್ಡಿ ವೀರ ಮರಣವನ್ನು ಅಪ್ಪಿದ್ದಾರೆ. ಹೀಗಾಗಿ ಸ್ಥಳವನ್ನು ಅಕ್ರಮವಾಗಿ ವಶಕ್ಕೆ ಪಡೆದಿರುವ ವ್ಯಕ್ತಿಗಳಿಂದ ಸ್ಮಾರಕವನ್ನು ಬಂಧಮುಕ್ತಗೊಳಿಸಿ ಪುನರ್ ನಿರ್ಮಾಣ ಮಾಡಬೇಕು. ಹಾಗೆಯೇ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ತ್ವರಿತ ಗತಿಯಲ್ಲಿ ಸ್ಮಾರಕವನ್ನು ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡುವ ಕ್ರಮಗಳನ್ನು ಕೈಗೊಳ್ಳದೆ ಇದ್ದಲ್ಲಿ, ಈ ವಿಷಯವನ್ನು ಚಳುವಳಿ ರೂಪಕ್ಕೆ ತಂದು ಹೋರಾಟವನ್ನು ನಡೆಸಲಗುತ್ತದೆ ಎಂದು ಅವರು ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News