ಬೆಂಗಳೂರು | ಗಾಝಾದಲ್ಲಿನ ಜನಾಂಗೀಯ ನರಮೇಧ ಖಂಡಿಸಿ ಪ್ರತಿಭಟನೆ

ಬೆಂಗಳೂರು : ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧವನ್ನು ಖಂಡಿಸಿ, ಆಲ್ ಇಂಡಿಯಾ ಸ್ಟೂಡೇಂಟ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಗುರುವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಭಾರತದಲ್ಲಿರುವ ಸಾರ್ವಜನಿಕ ಹಾಗೂ ಖಾಸಗಿ ಕಂಪೆನಿಗಳು ಇಸ್ರೇಲ್‍ಗೆ ಶಸ್ತ್ರಾಸ್ತ್ರ ರಫ್ತು ನಿಲ್ಲಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತಿಭಟಿಸುವ ಜನರ ಹಕ್ಕನ್ನು ಎತ್ತಿಹಿಡಿಯಬೇಕು ಮತ್ತು ಹಿಂದಿನ ಪ್ರತಿಭಟನಾಕಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಲು ಆಸಿಯಾನ್, ಬ್ರಿಕ್ಸ್ ಮತ್ತು ಯುಎನ್‍ನಂತಹ ಅಂತರ್‍ರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಸರಿಯಾಗಿ ತನ್ನ ನಿಲುವನ್ನು ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಎಸ್‍ಎ ಅಧ್ಯಕ್ಷ ಸಚಿನ್, ಕಾರ್ಯದರ್ಶಿ ಅರತ್ರಿಕಾ, ಗಂಗಾ, ರಂಗಕಲಾವಿದೆ ಯುಮುನಾ, ಎಐಸಿಸಿಟಿಯು ಅಧ್ಯಕ್ಷ ಕ್ಲಿಪ್ಟನ್ ಡಿ ರೊಜಾರಿಯೋ ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸರ ನಡುವೆ ವಾಗ್ವಾದ :
‘ಪ್ರತಿಭಟನಾಕಾರರು ಫೆಲೇಸ್ತೀನ್ ಧ್ವಜ ಹಿಡಿದು ಪ್ರತಿಭಟನೆ ಮಾಡುವಾಗ ಪೊಲೀಸರು ನಿರ್ಬಂಧಿಸಲು ಮುಂದಾದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಫೆಲೇಸ್ತೀನ್ ನಮ್ಮ ಶತ್ರು ದೇಶವಲ್ಲ. ಧ್ವಜ ಹಿಡಿಯಬಾರದು ಎಂದು ಲಿಖಿತ ರೂಪದಲ್ಲಿ ನೀಡಿ’ ಎಂದು ಪ್ರತಿಭಟನಾಕಾರರು ತಿಳಿಸಿದರು.