‘ಶಕ್ತಿ ಯೋಜನೆ’ಯಿಂದ ನಷ್ಟ, ನೌಕರರು ಪ್ರತಿಭಟಿಸುತ್ತಿದ್ದಾರೆ : ಆರ್.ಅಶೋಕ್

Update: 2024-12-25 14:17 GMT

ಆರ್.ಅಶೋಕ್ 

ಬೆಂಗಳೂರು : ‘ಮಹಿಳೆಯರಿಗೆ ಸಾರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ಯಿಂದ ರಾಜ್ಯ ಸರಕಾರಕ್ಕೆ ಅಪಾರ ನಷ್ಟವಾಗಿದ್ದು, ಸಾರಿಗೆ ನೌಕರರು ಪ್ರತಿಭಟಿಸುತ್ತಿದ್ದಾರೆ. ನಾಮ ಹಾಕುವುದರಲ್ಲಿ ಕಾಂಗ್ರೆಸ್ಸಿಗರು ಪಳಗಿದವರು’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರಕಾರ ಆರ್ಥಿಕ ನಷ್ಟದಲ್ಲಿದೆ. ಬಸವರಾಜ ರಾಯರೆಡ್ಡಿ ಹಲವು ಬಾರಿ ಹೇಳಿದರೂ ಸಿಎಂ ಕೇಳಿಲ್ಲ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು ನಷ್ಟ ಉಂಟಾಗಿದೆ. ಸಾರಿಗೆ ನೌಕರರು ಧರಣಿಗೆ ಮುಂದಾಗಿದ್ದು, ಅವರಿಗೆ 4ಸಾವಿರ ಕೋಟಿ ರೂ. ನೀಡಬೇಕು. ರೈತರಿಗೆ 1500ಕೋಟಿ ರೂ. ಸಬ್ಸಿಡಿ ನಾಮ ಹಾಕಿದ್ದಾರೆ ಎಂದು ದೂರಿದರು.

ಈ ವರ್ಷ ಒಂದೂವರೆ ಲಕ್ಷ ಕೋಟಿ ರೂ.ಸಾಲ ಮಾಡಿದ್ದಾರೆ. ಮುಂದಿನ ವರ್ಷ ಸಿಎಂ ಸಿದ್ದರಾಮಯ್ಯ ಮನಸ್ಸು ಮಾಡಿ 2ಲಕ್ಷ ಕೋಟಿ ರೂ.ಸಾಲ ಮಾಡಿದರೆ ಕರ್ನಾಟಕ ರಾಜ್ಯ ಜನ್ಮದಲ್ಲಿ ಮುಂದೆ ಬರಲು ಸಾಧ್ಯವಿಲ್ಲ ಎಂದು ಅಶೋಕ್ ಟೀಕಿಸಿದರು.

ರಸ್ತೆಗೆ ಹೆಸರು ಸರಿಯಲ್ಲ:

ಕರ್ನಾಟಕಕ್ಕೆ ಕೃಷ್ಣರಾಜಸಾಗರ ಅಣೆಕಟ್ಟನ್ನು ನೀಡಿದ ಮನೆತನದವರ ಹೆಸರನ್ನು ತೆಗೆದು ಕೆ.ಆರ್.ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಇಡುವುದು ಒಳ್ಳೆಯ ಬೆಳವಣಿಗೆಯಲ್ಲ. ಹಾಗೇನಾದರೂ ಹೆಸರು ಇಡಬೇಕು ಎಂದಿದ್ದರೆ ಹೊಸ ರಸ್ತೆಯೊಂದನ್ನು ನಿರ್ಮಿಸಿ ಅವರ ಹೆಸರು ಅಥವಾ ಅವರ ಕುಟುಂಬದವರ ಹೆಸರನ್ನು ಇಡಲಿ.

ಮಹಾರಾಜರ ಕುಟುಂಬ ಈ ನಾಡಿಗೆ ಸೇವೆ ಸಲ್ಲಿಸಿದೆ, ಅನ್ನ-ನೀರು ಕೊಟ್ಟಿದೆ. ಮಾರಿ ಕಣ್ಣು ಹೋರಿ ಮೇಲೆ ಎನ್ನುವಂತೆ ಆ ಕುಟುಂಬವನ್ನು ಗುರಿ ಮಾಡಬಾರದು. ಸಿಎಂ ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದು, ಅವರು ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆಂದರೆ ಜನರಿಗೆ ಅವರ ಬಗ್ಗೆ ಇರುವ ಭಾವನೆ ಬದಲಾಗುತ್ತದೆ ಎಂದರು.

ಸರಕಾರ ಹುಚ್ಚರ ಸಂತೆಯಾಗಿದೆ. ಸಿ.ಟಿ.ರವಿ ಮೇಲೆ ಸುಮಾರು ನಲ್ವತ್ತು-ಐವತ್ತು ಜನ ಹಲ್ಲೆ ಮಾಡಿ ಕೊಲೆ ಯತ್ನ ನಡೆದಿದೆ. ಇದರಲ್ಲಿ ಸಚಿವರು ಮತ್ತು ಅವರ ಪಿಎ ಪಾತ್ರ ಇದೆ. ಈ ಪ್ರಕರಣದಲ್ಲಿ ಅದೇ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಬೇಕೆಂದು ಆಗ್ರಹಿಸಿದ್ದೆವು. ನಮ್ಮನ್ನು ಖಾನಾಪುರ ಪೊಲೀಸ್ ಠಾಣೆಯಲ್ಲಿ ಐದು ಗಂಟೆಗಳ ಕಾಲ ಕಾಯಿಸಿ, ನಂತರ ದೂರು ಸ್ವೀಕರಿಸಿದ್ದಾರೆ.

ಸರಕಾರಕ್ಕೆ ಬುದ್ಧಿ ಭ್ರಮಣೆಯಾಗಿದೆ. ಪೊಲೀಸ್ ಠಾಣೆಗಳು ಸುರಕ್ಷಿತ ಅಲ್ಲ. ಯಾರಾದರೂ ಅಪರಾಧಿಯನ್ನು ಬಂಧಿಸಿದರೆ ಅವರನ್ನು ಕಬ್ಬಿನಗದ್ದೆಯಲ್ಲಿ ಇರಿಸಬೇಕು ಎಂದು ರೂಲ್ಸ್ ಮಾಡಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಏನೂ ಕೇಳಿದರೂ ನನಗೆ ಗೊತ್ತಿಲ್ಲ ಎನ್ನುತ್ತಿದ್ದಾರೆ ಎಂದು ಅವರು ದೂರಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News