ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನರ ಮೇಲೆ ಮೊಟ್ಟೆ ಎಸೆತ

Update: 2024-12-25 15:41 GMT

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ, ದಲಿತ ಸಮುದಾಯದ ನಿಂದನೆ ಸೇರಿದಂತೆ ಗಂಭೀರ ಆರೋಪದಡಿ ಬಂಧನಕ್ಕೊಳಗಾಗಿ ಇತ್ತೀಚಿಗೆ ಬಿಡುಗಡೆಯಾಗಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿಯ ಶಾಸಕ ಮುನಿರತ್ನ ಮೇಲೆ ಕೆಲವರು ಮೊಟ್ಟೆ ಎಸೆದಿರುವ ಘಟನೆ ಬುಧವಾರ ಜರುಗಿದ್ದು, ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಆರ್‌ಆರ್ ನಗರ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀದೇವಿ ನಗರ ವಾರ್ಡಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಹಿನ್ನೆಲೆ ಮುನಿರತ್ನ ತೆರಳುತ್ತಿದ್ದ ವೇಳೆ ನಂದಿನಿ ಲೇಔಟ್ ಬಳಿ ಕೆಲವರು ಮುನಿರತ್ನ ಮೇಲೆ ಮೊಟ್ಟೆ ಎಸೆದಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಭದ್ರತೆ ಒದಗಿಸಿ ಅವರನ್ನು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರು. ಇನ್ನೊಂದೆಡೆ, ಈ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮುನಿರತ್ನ ಬೆಂಬಲಿಗರು ಕಂಠೀರವ ಸ್ಟುಡಿಯೋ ಬಳಿ ಜಮಾಯಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು. ಆಗ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಯಿತು.

ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರತೀಕಾರಕ್ಕೆ ಅವರ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರಿಗೆ ಸೇರಿದ ಕಾರನ್ನು ಜಖಂಗೊಳಿಸಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನಂದಿನಿ ಲೇಔಟ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಉಭಯ ಪಕ್ಷಗಳ ಕಾರ್ಯಕರ್ತರ ಗದ್ದಲದಿಂದಾಗಿ ಕಂಠೀರವ ಸ್ಟುಡಿಯೋ ಮುಂಭಾಗ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಇದೇ ವೇಳೆ ಎರಡೂ ಪಕ್ಷಗಳಿಗೆ ಸೇರಿದ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ದೃಶ್ಯಕಂಡಿತು.

ಆ್ಯಸಿಡ್ ದಾಳಿಗೆ ಯತ್ನ: ಸ್ಥಳೀಯ ಕಾಂಗ್ರೆಸ್ ನಾಯಕಿ ಕುಸುಮಾ ಅವರನ್ನು ಶಾಸಕಿಯನ್ನಾಗಿ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಅವರ ಬೆಂಬಲಿಗರಿಂದ ನನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ. ಇದಕ್ಕೆ ಈ ಇಬ್ಬರ ಸಹೋದರರು ಮತ್ತವರ ಬೆಂಬಲಿಗರೇ ನೇರ ಕಾರಣ. ಅಲ್ಲದೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ನನ್ನ ಮೇಲೆ ಹಲ್ಲೆ ಯತ್ನ ನಡೆದಿತ್ತು. ಈ ಬಗ್ಗೆ ರಾಷ್ಟ್ರಪತಿ, ಪ್ರಧಾನಿಮಂತ್ರಿಗೆ ದೂರು ನೀಡಿದ್ದೇನೆ. ನನ್ನನ್ನ ಹತ್ಯೆ ಮಾಡಲು ಸಂಚು ರೂಪಿಸಿರುವುದು ಗೊತ್ತಾಗಿದೆ.

-ಮುನಿರತ್ನ, ಬಿಜೆಪಿ ಶಾಸಕ

ನಾನೇ ತಪಾಸಣೆ ಮಾಡಿದೆ, ತಲೆಗೆ ಪೆಟ್ಟು ಬಿದ್ದಿದೆ: ಮುನಿರತ್ನ ಅವರನ್ನು ಭೇಟಿ ಮಾಡಿ ನಾನೇ ತಪಾಸಣೆ ಮಾಡಿದೆ. ಅವರ ತಲೆಗೆ ಪೆಟ್ಟು ಬಿದ್ದಿದೆ. ತಲೆಯ ಹಿಂಭಾಗಕ್ಕೆ ಪೆಟ್ಟು ಬಿದ್ದಾಗ ವಾಂತಿ ಆಗಿದೆ. ಗಾಯಗೊಂಡ ಜಾಗದಲ್ಲಿ ಸ್ವಲ್ಪ ಕೂದಲು ಸುಟ್ಟು ಹೋಗಿದೆ. ಸಿಟಿ ಸ್ಕ್ಯನ್ ಮಾಡಿಸಲು ಸಲಹೆ ನೀಡಿದ್ದೇನೆ. ಸಂಬಂಧಪಟ್ಟ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಬಿಜೆಪಿ ಸಂಸದ ಡಾ.ಮಂಜುನಾಥ್ ಹೇಳಿದ್ದಾರೆ.

ಮೂವರು ವಶಕ್ಕೆ: ಇಂದು ಬೆಳಗ್ಗೆ 12.30ಕ್ಕೆ ಶಾಸಕ ಮುನಿರತ್ನ ಅವರು ಕಾರ್ಯಕ್ರಮ ಮುಗಿಸಿ ವಾಪಸ್ ಹೋಗುವಾಗ ಘಟನೆ ನಡೆದಿದೆ. ಸುಮಾರು 15 ಮೀಟರ್ ದೂರದಿಂದ ಮೊಟ್ಟೆ ಎಸೆಯಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕಡೆಯಿಂದ ದೂರು ಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕೃತ್ಯದಲ್ಲಿ ಭಾಗಿಯಾದ ಮೂವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ.

-ಸೈದುಲು ಅಡಾವತ್, ಉತ್ತರ ವಿಭಾಗದ ಡಿಸಿಪಿ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News