ಬಿಜೆಪಿಯವರು ರೈತ ವಿರೋಧಿಗಳು: ಡಿಸಿಎಂ ಡಿ.ಕೆ.ಶಿವಕುಮಾರ್

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು, ಎ.2: "ರೈತರಿಗೆ ನೆರವಾಗಲು ರಾಜ್ಯ ಸರಕಾರ ಹಾಲಿನ ದರ ಏರಿಕೆ ಮಾಡಿದ್ದು, ಇದರ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗರು ರೈತ ವಿರೋಧಿಗಳು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಸದಾಶಿವ ನಗರ ನಿವಾಸದ ಬಳಿ ಬುಧವಾರ ಬೆಳಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ನಾವು ವಿದ್ಯುತ್ ಬೆಲೆ ಕಡಿಮೆ ಮಾಡಿದಾಗ ಅವರು ಮಾತನಾಡಲಿಲ್ಲ. ಅವರಿಗೆ ಜನರ ಮೇಲೆ ಕಾಳಜಿ ಇದ್ದರೆ, ಪೆಟ್ರೋಲ್, ಡೀಸೆಲ್, ಜಾನುವಾರುಗಳಿಗೆ ಹಾಕುವ ಬೂಸಾ ದರಗಳನ್ನು ಇಳಿಸಲಿ. ಬೆಲೆ ಏರಿಕೆ ನಂತರವೂ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಹಾಲು, ಮೊಸರಿನ ಬೆಲೆ ಕಡಿಮೆ ಇದೆ" ಎಂದು ಹೇಳಿದರು.
"ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬೆಲೆಯನ್ನು ಪ್ರತಿ ಲೀಟರ್ ಗೆ ಕನಿಷ್ಠ 1 ಪೈಸೆಯಷ್ಟು ಏರಿಕೆ ಮಾಡಲೇಬೇಕಾಗಿದೆ. ಬಡವರಿಗೆ ಹೊರೆಯಾಗದಂತೆ ನೀರಿನ ದರ ಹೆಚ್ಚಳಕ್ಕೆ ಸೂಚನೆ ನೀಡಲಾಗಿದೆ. ಜಲ ಮಂಡಳಿ ವಾರ್ಷಿಕವಾಗಿ ಒಂದು ಸಾವಿರ ಕೋಟಿ ರೂ. ನಷ್ಟ ಅನುಭವಿಸುತ್ತಿದ್ದು, ಮುಂದಿನ ಹಂತಗಳ ಯೋಜನೆ ಕೈಗೆತ್ತಿಗೊಳ್ಳಬೇಕಾದರೆ ದರ ಏರಿಕೆ ಅನಿವಾರ್ಯ. ಇದಕ್ಕೂ ಮುನ್ನ ಜನರಿಗೂ ನೀರಿನ ಪ್ರಾಮುಖ್ಯತೆ ಅರಿಯುವಂತೆ ಮಾಡಬೇಕು" ಎಂದು ತಿಳಿಸಿದರು.
"ಇನ್ನು ಕಸದ ವಿಚಾರವಾಗಿ ಹೇಳುವುದಾದರೆ, ಕೇಂದ್ರ ಬಿಜೆಪಿ ಸರ್ಕಾರ ಕಾನೂನು ಮಾಡಿದ್ದು, ಬಿಜೆಪಿ ಸರಕಾರ 2022ರಲ್ಲೇ ದುಬಾರಿ ಸೆಸ್ ವಿಧಿಸಿತ್ತು. ನಾವು ಅದನ್ನು ಕಡಿಮೆ ಮಾಡುತ್ತಿದ್ದೇವೆ. ಈ ವಿಚಾರವಾಗಿ ಜಾಹೀರಾತು ಹಾಗೂ ಪತ್ರಿಕಾ ಪ್ರಕಟನೆ ಹೊರಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜನರ ನೋವು ನಮಗೂ ಅರಿವಾಗುತ್ತದೆ. ಇದರಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ" ಎಂದು ತಿಳಿಸಿದರು.
ಕುಮಾರಸ್ವಾಮಿಯವರ ಟೀಕೆ ಬಗ್ಗೆ ಕೇಳಿದಾಗ, "ಅವರು ದಿನ ನಿತ್ಯ ಟೀಕೆ ಮಾಡಲಿ. ನಾವು ಜನರಿಗೆ ಉತ್ತಮ ಆಡಳಿತ ನೀಡಬೇಕು. ಕುಮಾರಸ್ವಾಮಿ ಅವರ ಸಹೋದರ ಹಾಲು ಒಕ್ಕೂಟಗಳ ಅಧ್ಯಕ್ಷರು. ಅವರಿಗೂ ಬೆಲೆ ಕಡಿಮೆ ಮಾಡುವ ಅವಕಾಶವಿದೆ. ಅವರು ಹಾಸನದಲ್ಲಿ 4 ರೂ. ಕಡಿಮೆ ಮಾಡಿ ಹಾಲು ನೀಡಲಿ ನೋಡೋಣ. ರೈತರು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ನೀಡಲು ಈ ನಿರ್ಧಾರ ಮಾಡಿದ್ದೇವೆ" ಎಂದು ತಿಳಿಸಿದರು.