ಬೆಂಗಳೂರು | ಮಗುವಿನ ಮೇಲೆ ನಾಯಿ ದಾಳಿ ; ಶ್ವಾನದ ಮಾಲಕರ ವಿರುದ್ಧ ಎಫ್‍ಐಆರ್
Update: 2024-12-26 11:38 GMT
ಬೆಂಗಳೂರು : ಎರಡು ವರ್ಷದ ಮಗುವಿನ ಮೇಲೆ ನಾಯಿ ದಾಳಿ ನಡೆಸಿರುವ ಘಟನೆ ಸಂಬಂಧ ಶ್ವಾನದ ಮಾಲಕರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.23ರಂದು ಬಾಣಸವಾಡಿಯ ವೆಂಕಟಸ್ವಾಮಿ ಲೇಔಟ್‍ನಲ್ಲಿ ನಾಯಿ ದಾಳಿಯಿಂದ 2 ವರ್ಷದ ಹೆಣ್ಣು ಮಗುವಿನ ಭುಜಕ್ಕೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಂದೆ ನಬ್ರಾಝ್ ದಮಾಲ್, ಶ್ವಾನದ ಮಾಲಕರ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, 80 ಸಾವಿರ ರೂ. ಖರ್ಚು ಆಗಿದೆ. ಶ್ವಾನ ಮಾಲಕನ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ ಎಂದು ಗಾಯಾಳು ಮಗುವಿನ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.