ಕೇಂದ್ರ ಸರಕಾರ ರೈತರನ್ನು ದೇಶದ್ರೋಹಿಗಳಂತೆ ನಡೆಸಿಕೊಳುತ್ತಿದೆ : ಕುರುಬೂರು ಶಾಂತಕುಮಾರ್

Update: 2024-02-21 12:50 GMT

ಬೆಂಗಳೂರು: ‘ಹೊಸದಿಲ್ಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ಭಿಕ್ಷೆ ಬೇಡುತ್ತಿಲ್ಲ. ಸರಕಾರ ನೀಡಬೇಕಿರುವ ನ್ಯಾಯಯುತ ಬೇಡಿಕೆಯನ್ನು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಕೇಂದ್ರ ಸರಕಾರ 23 ಬೆಳೆಗಳಿಗೆ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡಬೇಕು’ ಎಂದು ಸಂಯುಕ್ತ ಕಿಸಾನ್ ಮೋರ್ಚಾ ದಕ್ಷಿಣ ಭಾರತ ಸಂಚಾಲಕ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.

ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ರೈತರನ್ನು ಭಯೋತ್ಪಾದಕರು ದೇಶದ್ರೋಹಿಗಳಂತೆ ನಡೆಸಿಕೊಳುತ್ತಿದೆ. ರೈತ ಹೋರಾಟಗಾರರ ಮೇಲೆ ಅಶ್ರುವಾಯು ಸಿಡಿಸುವ ದಮನಕಾರಿ ನೀತಿಯನ್ನು ಅನುಸರಿಸಲಾಗುತ್ತಿದೆ. ಆದುದರಿಂದ ದೇಶದ ಎಲ್ಲ ರೈತರು ಎಚ್ಚೆತ್ತುಕೊಂಡು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಸ್ವಾಮಿನಾಥನ್ ವರದಿಯಂತೆ ಬೆಂಬಲ ಬೆಲೆ, ಡಬ್ಲ್ಯೂಟಿಓ ಒಪ್ಪಂದದಿಂದ ಕೇಂದ್ರ ಸರಕಾರ ಹೊರಗುಳಿಯುವುದು, ರೈತರಿಗೆ ಪಿಂಚಣಿ ಯೋಜನೆ, ಫಸಲ್ ಭೀಮಾ ಬೆಳೆ ವಿಮೆ ಪದ್ಧತಿ ಬದಲಾಗಬೇಕು, ಕಳೆದ ವರ್ಷ ದಿಲ್ಲಿಯಲ್ಲಿ ನಡೆದ ರೈತ ಹೋರಾಟದಲ್ಲಿ ಹುತಾತ್ಮರಾದ 750 ರೈತ ಕುಟುಂಬದ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣರೆಡ್ಡಿ, ಕಬ್ಬು ಬೆಳೆಗಾರರ ಸಂಘದ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ನೆಲಮಂಗಲ ತಾಲೂಕು ಅಧ್ಯಕ್ಷ ರಾಜೇಶ್, ಹಾರೋಹಳ್ಳಿ ಗಜೇಂದ್ರಸಿಂಗ್, ಕನಕಪುರ ಶಿವಕುಮಾರ್, ನರಸಿಂಹಯ್ಯ, ಮಾದೇಶ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.

‘ಕೇಂದ್ರ ಸರಕಾರದ ಜೊತೆ 4ನೆ ಸುತ್ತಿನ ಮಾತುಕತೆ ನಡೆದಿದೆ. ಮಾತುಕತೆಯ ನೆಪದಲ್ಲಿ ವಿಳಂಬ ಧೋರಣೆ ಅನುಸರಿಸುವುದನ್ನು ಬಿಟ್ಟು ರೈತರ ಸಮಸ್ಯೆಗಳನ್ನು ಬಗೆಹರಿಸಲಿ. ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ರಾಜಸ್ಥಾನದ ಲಕ್ಷಾಂತರ ರೈತರು ಶಾಂತಿಯುತವಾಗಿ ದಿಲ್ಲಿ ಚಲೋ ನಡೆಸುತ್ತಿದ್ದಾರೆ. ಸಮಸ್ಯೆ ಬಗೆಹರಿಯುವ ತನಕ ಚಳವಳಿಯಿಂದ ಹಿಂದೆ ಸರಿಯುವುದಿಲ್ಲ. ಇನ್ನೂ ಹೆಚ್ಚು ಜನರನ್ನು ಸಂಘಟಿಸುತ್ತೇವೆ’

ಕುರುಬೂರು ಶಾಂತಕುಮಾರ್, ಸಂಯುಕ್ತ ಕಿಸಾನ್ ಮೋರ್ಚಾ, ದಕ್ಷಿಣ ಭಾರತ ಸಂಚಾಲಕ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News