‘ಬೆಂಗಳೂರಿನಲ್ಲಿ ನಿರಂತರ ಮಳೆ’ ಆಡಳಿತ-ವಿಪಕ್ಷಗಳ ನಡುವೆ ಜಟಾಪಟಿ

Update: 2024-10-16 11:58 GMT

ಬೆಂಗಳೂರು : ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಎರಡು ದಿನಗಳಿಂದ ಬೆಂಗಳೂರು ನಗರದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಈ ವಿಚಾರವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ಯುದ್ಧಕ್ಕೂ ಕಾರಣವಾಗಿದ್ದು, ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ.

‘ಮುಡಾ ಹಗರಣ ಮುಚ್ಚಿ ಹಾಕಲು ಹೊಸ ಹೊಸ ಡ್ರಾಮಾ ಆಯೋಜಿಸಿ, ತುತ್ತೂರಿ ಊದುತ್ತಿರುವ ಎ-1 ಆರೋಪಿ ಭ್ರಷ್ಟ ಸಿದ್ದರಾಮಯ್ಯನವರ ಸರಕಾರದ ದುರಾಡಳಿತದಿಂದ ಬೆಂಗಳೂರಿನಲ್ಲಿ ಪ್ರವಾಹ ಸದೃಶ ಪರಿಸ್ಥಿತಿ ತಲೆದೋರಿದೆ. ರಾಜಧಾನಿ ರಸ್ತೆಗಳು ಕೆರೆಗಳಾಗಿವೆ. ಮನೆಗಳು ಜಲಾವೃತವಾಗಿವೆ. ‘ಬ್ರ್ಯಾಂಡ್ ಬೆಂಗಳೂರು’ ಹೆಸರಲ್ಲಿ ಲೂಟಿ ಹೊಡೆದು, ಸಿಲಿಕಾನ್ ಸಿಟಿ ಜನರನ್ನು ಮಳೆ ನೀರಲ್ಲಿ ಮುಳುಗಿಸಿ, ಸಂಕಷ್ಟಕ್ಕೆ ತಳ್ಳಿದ ಡಿ.ಕೆ.ಶಿವಕುಮಾರ್ ಅವರೇ, ತಮ್ಮ ಕಾರ್ಯವೈಖರಿಯ ಬಂಡವಾಳ ಬಯಲಾಗಿದೆ. ಭೀಕರ ಮಳೆಗೆ ನೊಂದವರ ಶಾಪ ತಮಗೆ ತಟ್ಟದೇ ಇರದು’ ಎಂದು ಬಿಜೆಪಿ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದೆ.

ಈ ಮಧ್ಯೆ ಟ್ವೀಟ್ ಮಾಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ‘ಒಂದೇ ದಿನದ ವರುಣನ ಅಬ್ಬರಕ್ಕೆ ಭಾರತದ ಸಿಲಿಕಾನ್ ವ್ಯಾಲಿಯ ಮೂಲಸೌಕರ್ಯ ವ್ಯವಸ್ಥೆ ತತ್ತರಿಸಿ ಹೋಗಿದೆ. ರಾಜ್ಯ ಸರಕಾರದ ದುರಾಡಳಿತ ಮತ್ತು ಅಸಮರ್ಪಕ ನಿರ್ವಹಣೆಯಿಂದ ಭಾರತದ ಐಟಿ ಕಾರಿಡಾರ್'ನಲ್ಲಿ ಪ್ರವಾಹಸದೃಶ ಪರಿಸ್ಥಿತಿ ತಲೆದೋರಿದೆ’ ಎಂದು ಟೀಕಿಸಿದ್ದಾರೆ.

‘ಒಳಚರಂಡಿ ವ್ಯವಸ್ಥೆ ಹದಗೆಟ್ಟು ರಸ್ತೆಗಳು ನದಿಗಳಾಗಿವೆ. ಸರಕಾರದ ಘೋರ ವೈಫಲ್ಯದಿಂದ ಬೆಂಗಳೂರಿನ ಜನರು ಮಳೆಗೆ ಸಿಕ್ಕಿ ನರಕಯಾತನೆ ಅನುಭವಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆಯ ಕೆಟ್ಟ ನೀತಿಗಳು ನಾಡಪ್ರಭು ಕೆಂಪೇಗೌಡರು ಕಟ್ಟಿದ ಹೆಮ್ಮೆಯ ಬೆಂಗಳೂರು ನಗರವನ್ನು ಹಾಳುಗೆಡವಿದೆ. ಹೂಡಿಕೆದಾರ ಸ್ವರ್ಗವಾಗಿದ್ದ ಬೆಂಗಳೂರು, ಜಾಗತಿಕ ಮಟ್ಟದ ತಂತ್ರಜ್ಞಾನದ ನೆಚ್ಚಿನ ನೆಲೆವೀಡಾಗಿದ್ದ ಬೆಂಗಳೂರು ಈಗ ಇನ್ನಿಲ್ಲದ ದುಸ್ಥಿತಿಗೆ ಸಿಲುಕಿ ಕಣ್ಣೀರು ಹಾಕುತ್ತಿದೆ’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಡೂಪ್ಲಿಕೇಟ್ ಸಿಎಂ ಬ್ರ್ಯಾಂಡ್: ‘ದೇವೇಗೌಡ ಅವರು ದೂರದೃಷ್ಟಿಯಿಂದ ಬೆಂಗಳೂರು ನಗರಕ್ಕೆ ಮಾಹಿತಿ ತಂತ್ರಜ್ಞಾನದ ಅಡಿಪಾಯ ಹಾಕಿದರು. ಆ ನಂತರ ಬಂದ ಕಾಂಗ್ರೆಸ್ ಸರಕಾರ ದೇವೇಗೌಡರ ದಿಸೆಯಿಂದ ಚಿನ್ನದ ಬೆಲೆ ಬಂದ ಭೂಮಿಯನ್ನು ಕೊಳ್ಳೆ ಹೊಡೆಯಲು ರಿಯಲ್ ಎಸ್ಟೇಟ್ ದಂಧೆಗೆ ನಾಂದಿ ಹಾಡಿತು. ಆ ರಿಯಲ್ ಎಸ್ಟೇಟ್ ದಂಧೆಯ ರಕ್ಕಸ ರೂಪವೇ ಡೂಪ್ಲಿಕೇಟ್ ಸಿಎಂ ಬ್ರ್ಯಾಂಡ್ ಬೆಂಗಳೂರು. ಬ್ರ್ಯಾಂಡ್ ಬೆಂಗಳೂರು ಮುಳುಗುತ್ತಿದೆ. ಡೂಪ್ಲಿಕೇಟ್ ಸಿಎಂ ಫೊಟೋ ಶೂಟ್‍ನಲ್ಲಿ ಬ್ಯುಸಿಯಾಗಿದ್ದಾರೆ. ರೋಮ್ ಹೊತ್ತಿ ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ’ ಎಂದು ಜೆಡಿಎಸ್ ಎಕ್ಸ್‌ ನಲ್ಲಿ ಟೀಕಿಸಿದೆ.

‘ನಿನ್ನೆಯಿಂದ ನಿರಂತರ ಸುರಿಯುತ್ತಿರುವ ಮಳೆಗೆ ಬೆಂಗಳೂರಿನ ಜನಸಾಮಾನ್ಯರು ಅಕ್ಷರಶಃ ಪರದಾಡುತ್ತಿರುವ ದೃಶ್ಯಗಳನ್ನು ಗಮನಿಸುತ್ತಿದ್ದರೆ ರಾಜ್ಯದ ಕಾಂಗ್ರೆಸ್ ಸರಕಾರದ ಅಜಾಗರೂಕತೆ, ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ರಾಜಧಾನಿ ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಫಲತೆ ಎದ್ದು ಕಾಣುತ್ತಿದೆ’

-ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

‘ಬೆಂಗಳೂರಿನಲ್ಲಿ ಮಳೆ ಆರಂಭವಾಗುವ ಮೊದಲೇ ರಾಜಕಾಲುವೆ ಸ್ವಚ್ಚಗೊಳಿಸುವ ಕೆಲಸ ಮಾಡಲು ಬಿಬಿಎಂಪಿಗೆ ಹಣ ನೀಡದೇ ಬ್ರ್ಯಾಂಡ್ ಬೆಂಗಳೂರು ಎಂದರೆ ಪ್ರಯೋಜನವಿಲ್ಲ. ಕೇವಲ ಬ್ರ್ಯಾಂಡ್ ಬೆಂಗಳೂರು ಎಂದು ಹೇಳಿದರೆ ಸಾಲದು, ಪ್ರತಿಪಕ್ಷಗಳ ಸಲಹೆಗಳನ್ನು ತೆಗೆದುಕೊಂಡು ಎಲ್ಲರ ಸಹಕಾರ ಪಡೆದು ಕೆಲಸ ಮಾಡಬೇಕು. ಹಿಂದೆ ಅವರು ಪ್ರತಿಪಕ್ಷದಲ್ಲಿದ್ದಾಗ ಏನೇನು ಟೀಕೆ ಮಾಡಿದ್ದಾರೆಂದು ನೋಡಿಕೊಳ್ಳಲಿ’

-ಬಸವರಾಜ ಬೊಮ್ಮಾಯಿ ಸಂಸದ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News