ಬೆಂಗಳೂರು | ಶ್ರೀಗಂಧ ಮರ ಕಳ್ಳತನ : ಪ್ರಕರಣ ದಾಖಲು
Update: 2024-10-16 15:45 GMT
ಬೆಂಗಳೂರು: ಮಳೆಯಿಂದಾಗಿ ಅಕ್ಕಪಕ್ಕದ ಮನೆಗಳಿಗೆ ಶಬ್ದ ಕೇಳಿಸುವುದಿಲ್ಲ ಎಂದು ತಿಳಿದ ಆರೋಪಿಗಳು ಇಲ್ಲಿನ ನ್ಯಾಯಾಂಗ ಬಡಾವಣೆಯ ಪಾರ್ಕ್‍ನಲ್ಲಿರುವ ಶ್ರೀಗಂಧದ ಮರವನ್ನು ಕತ್ತರಿಸಿ ಕದ್ದೊಯ್ದಿರುವ ಘಟನೆ ಬುಧವಾರ ಬೆಳಗಿನ ಜಾವ ವರದಿಯಾಗಿದೆ.
ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್ ಅವರು ನೀಡಿದ ಮಾಹಿತಿ ಅನ್ವಯ ಘಟನಾ ಸ್ಥಳಕ್ಕೆ ಎಎಸ್‍ಐ ನಾರಾಯಣಸ್ವಾಮಿ ಹಾಗೂ ಯಲಹಂಕದ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡಿರುವ ಸಾಮಾಜಿಕ ಹೋರಾಟಗಾರ ಎಚ್.ಎಂ.ವೆಂಕಟೇಶ್, ನ್ಯಾಯಾಂಗ ಬಡಾವಣೆಯಲ್ಲಿ ಮನೆಗಳ್ಳತನ, ಅಂಗಡಿಗಳ ಕಳ್ಳತನ, ಶ್ರೀಗಂಧ ಮರಗಳ ಕಳ್ಳತನಗಳು ನಿರಂತರವಾಗಿ ನಡೆಯುತ್ತಿವೆ. ಹಾಗಾಗಿ ಇಲ್ಲಿಗೆ ಪೊಲೀಸರು ರಾತ್ರಿ ಪಾಳಿಯ ಗಸ್ತನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.