ನಮ್ಮ ಸರಕಾರ ಬಂದ ನಂತರ ಒಂದು ಸಾವಿರ ಮೃತರ ಅವಲಂಬಿತರಿಗೆ ಅನುಕಂಪ ಆಧಾರಿತ ನೌಕರಿ : ಸಚಿವ ರಾಮಲಿಂಗಾ ರೆಡ್ಡಿ

Update: 2024-10-16 15:48 GMT

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು(ಕೆಎಸ್ಸಾರ್ಟಿಸಿ) ಕಾರ್ಮಿಕ ಆಧಾರಿತ ಸಂಸ್ಥೆ ಆಗಿದ್ದರೂ, ನಾಲ್ಕು ವರ್ಷಗಳಿಂದ ಯಾವುದೇ ಅನುಕಂಪದ ಆಧಾರದಲ್ಲಿ ನೇಮಕಾತಿ ನಡೆದಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರ ಜಾರಿಗೆ ಬಂದ 18 ತಿಂಗಳೊಳಗೆ ಒಂದು ಸಾವಿರ ಮೃತರ ಅವಲಂಬಿತರಿಗೆ ನಿಗಮದಲ್ಲಿ ಅನುಕಂಪ ಆಧಾರಿತ ನೌಕರಿಯನ್ನು ನೀಡಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಬುಧವಾರ ಇಲ್ಲಿನ ಶಾಂತಿನಗರದಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ–2ರ ಆವರಣದಲ್ಲಿ ನಿಗಮದ 63ನೆ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಿಗಮದ ವತಿಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದು ಕಾರ್ಮಿಕರಿಗೆ ಹಾಗೂ ಅವರ ಕುಟುಂಬ ವರ್ಗಕ್ಕೆ ಅನುಕೂಲವಾಗಿರುತ್ತದೆ. ಜಾಗತಿಕ ಮಟ್ಟದಲ್ಲಿ ಇಂಧನದ ಬೆಲೆ ಹೆಚ್ಚಾದಾಗ ನಿಗಮದ ಪ್ರಯಾಣ ದರಗಳನ್ನು ಪರಿಷ್ಕರಿಸುವ ಕಾರ್ಯವನ್ನು ಕೈಗೊಳ್ಳಬೇಕು. ಇದರಿಂದ ಕಾರ್ಮಿಕರಿಗೆ ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.

ಕೆಎಸ್ಸಾರ್ಟಿಟಿಸಿ ದಿನನಿತ್ಯ 8849 ವಾಹನಗಳ ಮೂಲಕ 8068 ಅನುಸೂಚಿಗಳನ್ನು ಕಾರ್ಯಾಚರಣೆಗೊಳಿಸಿ, 28.50 ಲಕ್ಷ ಕಿ.ಮೀ. ಕ್ರಮಿಸಿ, 34.92 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿದ್ದು, 33,371 ಸಿಬ್ಬಂದಿಗಳನ್ನು ಹೊಂದಿದೆ. ಸರಕಾರವು ನಿಗಮಗಳಿಗೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಈ ಪೈಕಿ ನಾಲ್ಕು ನಿಗಮಗಳಲ್ಲಿ 3417 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ನಾಲ್ಕು ನಿಗಮಗಳಲ್ಲಿ 9,000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು, ಈ ಪೈಕಿ 1,883 ಚಾಲಕ ಕಂ ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. 6,500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೆ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ನಿಗಮಗಳ ವಾಹನಗಳಲ್ಲಿ 308.12 ಕೋಟಿ ಮಹಿಳೆಯರು ಪ್ರಯಾಣಿಸಿದ್ದು, ಅವರ ಪ್ರಯಾಣದ ಶೂನ್ಯ ಟಿಕೇಟ್ ಮೌಲ್ಯ 7,431 ಕೋಟಿ ರೂ.ಗಳಾಗಿರುತ್ತದೆ. ಮಹಿಳಾ ಪ್ರಯಾಣಿಕರ ಪ್ರಯಾಣದ ಪ್ರಮಾಣ ಶೇ.58.12 ಆಗಿರುತ್ತದೆ. ಶಕ್ತಿ ಯೋಜನೆ ಜಾರಿಗೆ ಬರುವ ಮುನ್ನ ಪ್ರತಿದಿನ ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೊಳಿಸುತ್ತಿದ್ದ 1,58,909 ಟ್ರಿಪ್‍ಗಳ ಪ್ರಮಾಣವು 1,72,333ಗೆ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದರು.

ಇದೇ ವೇಳೆ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್(ವಾಸು), ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಸಾರಿಗೆ ಇಲಾಖೆಯ ಕಾರ್ಯದರ್ಶಿ ವಿ. ಅನ್ಬುಕುಮಾರ್, ಡಾ. ನಂದಿನಿದೇವಿ, ಕಾರ್ಮಿಕ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News