ʼನೀರಾವರಿಯೇತರ ಕಾಮಗಾರಿ ಪ್ರಸ್ತಾವಗಳಿಗೆ ಅನುಮೋದನೆ ಬೇಡʼ : ಸುತ್ತೋಲೆ

Update: 2024-11-15 14:34 GMT

ಬೆಂಗಳೂರು : ಜಲಸಂಪನ್ಮೂಲ ಇಲಾಖೆಯಲ್ಲಿ ನಿಯಮ ಉಲ್ಲಂಘಿಸಿ ನೀರಾವರಿಯೇತರ ಕಾಮಗಾರಿಗಳನ್ನು ಕೈಗೊಳ್ಳತಕ್ಕದ್ದಲ್ಲ. ಜತೆಗೆ ಇಲಾಖೆಯು ಮುಂದಿನ ದಿನಗಳಲ್ಲಿ ನೀರಾವರಿಯೇತರ ಪ್ರಸ್ತಾವವನ್ನು ಅನುಮೋದನೆಗೆ ಸಲ್ಲಿಸತಕ್ಕದ್ದಲ್ಲ ಎಂದು ಆರ್ಥಿಕ ಇಲಾಖೆ ಸರಕಾರದ ಕಾರ್ಯದರ್ಶಿ ಡಾ.ಪಿ.ಸಿ.ಜಾಫರ್ ಸುತ್ತೋಲೆ ಹೊರಡಿಸಿದ್ದಾರೆ.

ಜಲ ಸಂಪನ್ಮೂಲ ಇಲಾಖೆಯಡಿಯಲ್ಲಿ ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ ಮತ್ತು ವಿಶ್ವೇಶ್ವರಯ್ಯ ನಿಗಮ ನಿಯಮಿತಗಳನ್ನು ಕಂಪೆನಿ ಕಾಯ್ದೆಯಡಿ ಸ್ಥಾಪಿಸಲಾಗಿರುತ್ತದೆ. ಈ ನಿಗಮಗಳು ಕಂಪೆನಿ ಕಾಯ್ದೆ-1956 ಹಾಗೂ 2013ರ ಪ್ರಕಾರ Memorandum of Articles of Association Objects clause ಹೊಂದಿದ್ದು, ಇದರಲ್ಲಿ ನಿಗಮಗಳು ಕೈಗೊಳ್ಳಬಹುದಾದ ಕಾಮಗಾರಿಗಳ ವ್ಯಾಪ್ತಿಯನ್ನು ನಿರ್ದಿಷ್ಟಪಡಿಸಲಾಗಿದೆ.

ಅದರಂತೆ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಈ ಯೋಜನೆಗಳಿಗೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್‍ವಸತಿ ಮತ್ತು ಪುನರ್ ನಿರ್ಮಾಣ, ನಿರ್ವಹಣೆ ಮತ್ತು ಇತ್ಯಾದಿ ಉದ್ದೇಶಗಳನ್ನು ನಿಗಧಿಪಡಿಸಲಾಗಿದೆ. ನಿರ್ದಿಷ್ಟ ಕಾಮಗಾರಿಗಳನ್ನು ಹೊರತುಪಡಿಸಿ ಇನ್ನಿತರೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಮೇಲ್ಕಂಡ ಕಾಯ್ದೆಯಡಿ ಅವಕಾಶವಿರುವುದಿಲ್ಲ.

ಆದರೆ, ನಿಗಮಗಳು ಕಾಯ್ದೆಗಳನ್ನು ಉಲ್ಲಂಘಿಸಿ ನೀರಾವರಿಯೇತರ ಕಾಮಗಾರಿಗಳಾದ ಸಮುದಾಯ ಭವನ, ದೇವಸ್ಥಾನ ಅಭಿವೃದ್ಧಿ, ಅಚ್ಚುಕಟ್ಟು ಪ್ರದೇಶ ಹೊರತುಪಡಿಸಿ ಹಾಗೂ ಗ್ರಾ.ಪಂ.ಸ್ವಾಧೀನದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಹಾಗೂ ಇನ್ನಿತರೆ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವುದು ಸರಕಾರದ ಗಮನಕ್ಕೆ ಬಂದಿರುತ್ತದೆ. ಬಜೆಟ್‍ನಲ್ಲಿ ಒದಗಿಸಲಾಗುತ್ತಿರುವ ಅನುದಾನದಲ್ಲಿ ಭಾಗಶಃ ಅನುದಾನವು ಇಂತಹ ನೀರಾವರಿಯೇತರ ಕಾಮಗಾರಿಗಳಿಗೆ ವೆಚ್ಚವಾಗುತ್ತಿದೆ.

ಇದರಿಂದಾಗಿ ನೀರಾವರಿ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ವಿಳಂಬವಾಗುತ್ತಿದೆ. ಆದುದರಿಂದ ನೀರಾವರಿಯೇತರ ಕಾಮಗಾರಿಗಳು ನಿಗಮಗಳ ಧೈಯ ಮತ್ತು ಉದ್ದೇಶಗಳಿಗೆ ವ್ಯತಿರಿಕ್ತವಾಗಿರುತ್ತದೆ. ಹೀಗಾಗಿ ಕಾಯ್ದೆಗಳನ್ನು ಉಲ್ಲಂಘಿಸಿ ನೀರಾವರಿಯೇತರ ಕಾಮಗಾರಿಗಳನ್ನು ಕೈಗೊಳ್ಳತಕ್ಕದ್ದಲ್ಲ ಎಂದು ನಿರ್ದೇಶನ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News