ಬಿಜೆಪಿ ಭಿನ್ನಮತೀಯರಿಂದ ‘ವಕ್ಫ್ ಆಸ್ತಿ’ ವಿರುದ್ಧ ಅಭಿಯಾನ ಘೋಷಣೆ

Update: 2024-11-15 15:07 GMT

ಯತ್ನಾಳ್‌/ರಮೇಶ್‌ ಜಾರಕಿಹೊಳಿ

ಬೆಂಗಳೂರು : ವಕ್ಫ್ ಬೋರ್ಡ್ ಮೂಲಕ ರೈತರ ಜಮೀನಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಆರೋಪಿಸಿ ರಾಜ್ಯ ಸರಕಾರದ ವಿರುದ್ಧ ನ.25ರಿಂದ ಒಂದು ತಿಂಗಳು ರಾಜ್ಯ ವ್ಯಾಪಿ ಜನಜಾಗೃತಿ ಅಭಿಯಾನ ನಡೆಸುವುದಾಗಿ ಬಿಜೆಪಿ ಭಿನ್ನಮತೀಯರ ತಂಡ ಇಂದಿಲ್ಲಿ ಪ್ರಕಟಿಸಿದೆ.

ಶುಕ್ರವಾರ ಸದಾಶಿನಗರದಲ್ಲಿರುವ ಮಾಜಿ ಸಚಿವ ಕುಮಾರ ಬಂಗಾರಪ್ಪ ನಿವಾಸದಲ್ಲಿ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಸೇರಿದಂತೆ ಪ್ರಮುಖರು ಜಂಟಿ ಪತ್ರಿಕಾಗೋಷ್ಠಿ ನಡೆಸಿ, ವಕ್ಫ್‍ನಿಂದ ಯಾವುದೇ ರೀತಿಯ ಅನ್ಯಾಯವಾಗಿದ್ದರೆ 90356 75734 ವಾಟ್ಸ್ ಆಪ್ ಸಂಖ್ಯೆಗೆ ಮನವಿ ಕಳುಹಿಸುವಂತೆ ಹೇಳಿದರು.

ಈ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ‘ರಾಜ್ಯದಲ್ಲಿ ಮೊದಲಿಗೆ ಒಂದು ಲಕ್ಷ ಎಕರೆ ವಕ್ಫ್‌ಗೆ ನಮೂದು ಇತ್ತು. ಈಗ 6 ಲಕ್ಷ ಎಕರೆ ಭೂಮಿ ವಕ್ಫ್‌ ಗೆ ತೆಗೆದುಕೊಳ್ಳಲು ಸರಕಾರ ಮುಂದಾಗಿದೆ. ಇಡೀ ದೇಶದಲ್ಲಿ 38 ಲಕ್ಷ ಎಕರೆ ಜಮೀನು ನಮೂದು ಎನ್ನುತ್ತಿದ್ದಾರೆ. ಹೀಗಾಗಿ ರಾಜ್ಯದ ಜನರಿಗೆ ಜನಜಾಗೃತಿ ಅಭಿಯಾನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯಾರೇ ವಕ್ಫ್‌ ನಿಂದ ನೋಟಿಸ್ ಕೊಟ್ಟಿದ್ದರೂ ನಾವು ಸಮರ್ಥಿಸಿಕೊಳ್ಳುವುದಿಲ್ಲ. ಟ್ರಿಬ್ಯುನಲ್ ರದ್ದಾಗಬೇಕು ಎನ್ನುವುದಕ್ಕೆ ನಮ್ಮ ಹೋರಾಟ. ನೋಟಿಸ್ ಕೊಡದೇ ವಕ್ಫ್ ಎಂದು ನಮೂದು ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ಇನ್ನೂ, ಈ ಜನಜಾಗೃತಿ ಅಭಿಯಾನಕ್ಕೆ ಹೈಕಮಾಂಡ್ ನಾಯಕರ ಅನುಮತಿಯ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಈಗಾಗಲೇ ನಮ್ಮ ಕೇಂದ್ರ ಗೃಹ ಸಚಿವರು, ಪ್ರಧಾನಿ ಮೋದಿ ಅವರು ಇದಕ್ಕೆ ಧ್ವನಿಗೂಡಿಸಿದ್ದಾರೆ. ಹೀಗಾಗಿ ನಮ್ಮ ಅಭಿಯಾನಕ್ಕೆ ಹೈಕಮಾಂಡ್ ಬೆಂಬಲ ವಿಚಾರವೇ ಬರುವುದಿಲ್ಲ. ಜನರ ಹಿತದೃಷ್ಟಿಯಿಂದ ಅಭಿಯಾನ ಮಾಡುತ್ತಿದ್ದೇವೆ ಎಂದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ‘ಜನರಿಗೆ ತೊಂದರೆ ಆಗುತ್ತಿರುವ ವಕ್ಫ್ ಆಸ್ತಿ ವಿಚಾರ ನಮೆಲ್ಲರ ಗಮನಕ್ಕೆ ಬಂದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಬಿಜಾಪುರದಲ್ಲಿ ಹೋರಾಟ ಪ್ರಾರಂಭ ಮಾಡಿದ್ದರು. ಯತ್ನಾಳ್ ಹೋರಾಟದ ಪರಿಣಾಮವಾಗಿ ಕೇಂದ್ರದ ವಕ್ಫ್ ಸಮಿತಿ ಸದಸ್ಯರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು ಎಂದರು.

1954ರಿಂದ ಆರಂಭವಾದ ಗೆಜೆಟ್ ಆದೇಶವನ್ನು ರದ್ದು ಮಾಡಬೇಕು. ರೈತರು, ಮಠಗಳು, ಸರಕಾರಿ ಜಾಗಗಳಿಗೆ ವಕ್ಫ್ ಎಂದು ಹೇಳಲಾಗುತ್ತಿದೆ. ಆ ಜಾಗಗಳನ್ನು ಖಾಯಂ ವಾಪಸ್ ಕೊಡಬೇಕು ಹಾಗೂ ಅನ್ವರ್ ಮಾನ್ಪಾಡಿ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಮಾಜಿ ಸಂಸದರಾದ ಜಿ.ಎಂ.ಸಿದ್ದೇಶ್ವರ್, ಪ್ರತಾಪ್‍ಸಿಂಹ, ಅಣ್ಣಾ ಸಾಹೇಬ್ ಜೊಲ್ಲೆ, ಬಿ.ವಿ. ನಾಯಕ್, ಶಾಸಕ ಹೊಳಲ್ಕೆರೆ ಚಂದ್ರಪ್ಪ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಬಿ.ಪಿ.ಹರೀಶ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News