ಸಮುದಾಯಗಳ ವಿವೇಕ ಮುಂದಿನ ಪೀಳಿಗೆಗೆ ಜ್ಞಾನದ ಭಾಗವಾಗಲಿ : ಕೋಟಿಗಾನಹಳ್ಳಿ ರಾಮಯ್ಯ
ಬೆಂಗಳೂರು : ರಾಜ್ಯ ಹಾಗೂ ದೇಶದಲ್ಲಿ ಅನೇಕ ಪಶುಪಾಲನ ಸಮುದಾಯಗಳಿವೆ. ಆ ಸಮುದಾಯಗಳಲ್ಲಿರುವ ಜ್ಞಾನ ಸಂಪತ್ತು, ವಿವೇಕ ಮುಂದಿನ ಪೀಳಿಗೆಗೆ ಜ್ಞಾನದ ಭಾಗವಾಗಲಿ ಎಂದು ಹಿರಿಯ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಗರದ ಸಮಗತ ಫೌಂಡೇಷನ್‌ನಲ್ಲಿ ದಖ್ಖನಿ ಡೈರೀಸ್ ವತಿಯಿಂದ ಆಯೋಜಿಸಿದ್ದ ‘ಕುರುಬ್ಕಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ಸಮುದಾಯವನ್ನು ಕೇವಲ ಹೊರಗಿನಿಂದ ಮಾತ್ರವಲ್ಲ. ಒಳಗಿನಿಂದ ಒಳಗೊಂಡು ಜತೆಯಾಗಬೇಕು. ಇಂದು ಅನೇಕ ಅಳಿವು ಉಳಿವಿನ ಪ್ರಶ್ನೆಗಳಿವೆ. ಅವೆಲ್ಲವೂ ರಾಜಕೀಯ ಪ್ರಶ್ನೆಗಳಾಗಿವೆ. ಆ ಪ್ರಶ್ನೆಗಳನ್ನು ಎದುರಿಸಲು ಪ್ರಯತ್ನಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಪೊಲೀಸ್ ಅಧಿಕಾರಿ ರವಿಕಾಂತೇಗೌಡ ಮಾತನಾಡಿ, ನಮ್ಮ ನೆಲವನ್ನು ಸಂಸ್ಕರಿಸಿ ಫಲವತ್ತಾಗಿ ಇಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಕುರುಬರ ಸಂಸ್ಕೃತಿಯ ಕುರಿತ ಕಾರ್ಯಕ್ರಮ ವಿಭಿನ್ನವಾಗಿದೆ. ಕುರುಬರು ಅಲೆಮಾರಿಗಳು ಆದ್ದರಿಂದ ಬಡವರು ಎಂದು ತಿಳಿದುಕೊಂಡಿದ್ದೇವೆ. ಆದರೆ ಅವರು ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದಾರೆ. ನೆಲವನ್ನು ಬರಡು ಮಾಡುತ್ತಾ ಶೋಷಿಸುತ್ತಿದ್ದರೆ, ಕುರುಬರು ನೆಲದ ಸಾರವನ್ನು ಮತ್ತೆ ಸೇರಿಸಿ ಫಲವತ್ತಾಗಿ ಮಾಡುವಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದರು.
ಸಮುದಾಯದ ಹಿರಿಯರಾದ ನೀಲಕಂಠ ಮಾಮಾ ಮಾತನಾಡಿ, ಕುರುಬರ ಮೂಲ ಸಂಸ್ಕೃತಿ ಕುರಿ ಹುಟ್ಟಿದ ಬಗೆ, ಕುರುಬ ಕಂಬಳಿಗಳು ಸೇರಿ ಇತರೆ ವಸ್ತುಗಳ ಹೇಗೆ ಮನುಷ್ಯನಿಗೆ ಪರಿಣಾಮಕಾರಿಯಾಗಿ ಉಪಯೋಗವಾಗಬಲ್ಲವು ಎಂಬುದನ್ನು ತಿಳಿಸಿದರು.
ಇದೇ ವೇಳೆ ಹಿರಿಯ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರು ಸಂಪಾದಿಸಿರುವ ‘ರತ್ನ ಪಕ್ಸಿ’ ಜನಪದ ಕಥೆಗಳು, ಹಾಗೂ ಟಗರಜೋಗಿ ತಲ್ಲಣಗಳು ಪುಸ್ತಕ ಬಿಡುಗಡೆ, ಜತೆಗೆ ಕುರುಬ ಮಹಿಳಾ ಕುಶಲಕರ್ಮಿಗಳಿಂದ ಉಣ್ಣೆ ಫೆಲ್ಟಿಂಗ್, ವಸ್ತ್ರ ನೇಯ್ಗೆಯಲ್ಲಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಹಿರಿಯ ವಿನ್ಯಾಸಕಾರ ಗೋಪಿಕೃಷ್ಣ, ಸಮಗತ ಫೌಂಡೇಷನ್ನ ರೋಶಿಣಿ, ದೀಪಾ, ಡಾ.ಚಂದ್ರಪ್ಪ ಸೊಬಟಿ ಮತ್ತಿತರರು ಉಪಸ್ಥಿತರಿದ್ದರು.