ಬೆಂಗಳೂರು | ಆನ್‌ಲೈನ್ ರೇಟಿಂಗ್ ವಂಚನೆಗಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆ ಬಳಸುತ್ತಿದ್ದ ವಂಚಕರ ಬಂಧನ

Update: 2024-11-15 17:32 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಆನ್‍ಲೈನ್ ಹೂಡಿಕೆ ಹೆಸರಿನಲ್ಲಿ ವಂಚಿಸಲು ವಿದ್ಯಾರ್ಥಿಗಳಿಂದ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಅಭಯ್ ದಾನ್ ಚರಣ್ (19), ಅರವಿಂದ್ ಕುಮಾರ್ (19), ಪವನ್ ಬಿಷ್ಣೋಯಿ (18) ಹಾಗೂ ಸವಾಯಿ ಸಿಂಗ್ (21) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಸಾರ್ವಜನಿಕರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು ಆನ್‍ಲೈನ್‍ನಲ್ಲಿ ರೇಟಿಂಗ್ ನೀಡುವ ಪಾರ್ಟ್ ಟೈಂ ಕೆಲಸ ಮಾಡಿದರೆ ಲಾಭ ನೀಡುವುದಾಗಿ ನಂಬಿಸುತ್ತಿದ್ದರು. ಬಳಿಕ ಆರಂಭದಲ್ಲಿ ಲಾಭಾಂಶ ನೀಡುತ್ತಿದ್ದ ಆರೋಪಿಗಳು, ನಂಬಿಕೆ ಗಳಿಸಿದ ಬಳಿಕ ಆನ್‍ಲೈನ್ ವೇದಿಕೆಗಳಲ್ಲಿ ಹೂಡಿಕೆ ಮಾಡಿದರೆ ಇನ್ನೂ ಹೆಚ್ಚು ಲಾಭಾಂಶ ನೀಡುವುದಾಗಿ ಹಣ ಪಡೆದು ವಂಚಿಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ.

ಇದೇ ರೀತಿ ಆರೋಪಿಗಳ ಜಾಲದಿಂದ 12.43 ಲಕ್ಷ ರೂ. ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರು ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು, ವಂಚನೆಗೆ ಬಳಕೆಯಾದ ಬ್ಯಾಂಕ್ ಖಾತೆಗಳ ವಿವರ ಆಧರಿಸಿ ಖಾತೆದಾರನನ್ನು ಕರೆತಂದು ವಿಚಾರಣೆಗೊಳಪಡಿಸಿದಾಗ ಆತ ವಿದ್ಯಾರ್ಥಿಯಾಗಿದ್ದು, ರಾಜಸ್ಥಾನ ಮೂಲದ ಆರೋಪಿಗಳು ಬ್ಯಾಂಕ್ ಖಾತೆ ತೆರೆಸಿ ವಂಚನೆಗೆ ಬಳಸಿರುವುದು ಪತ್ತೆಯಾಗಿದೆ.

ಅದರನ್ವಯ ರಾಜಸ್ಥಾನದ ಉದಯ್ ಪುರದಲ್ಲಿದ್ದ ಇಬ್ಬರು ಹಾಗೂ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವ ಪಿಜಿಯಲ್ಲಿ ತಂಗಿದ್ದ ಇಬ್ಬರ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ಯ ಇವರಿಂದ ಕೃತ್ಯಕ್ಕೆ ಉಪಯೋಗಿಸುತ್ತಿದ್ದ 19 ಮೊಬೈಲ್ ಫೋನ್‍ಗಳು, 2 ಲ್ಯಾಪ್ ಟಾಪ್ ಹಾಗೂ 20 ಸಿಮ್ ಕಾರ್ಡ್‍ಗಳು, ವಿದ್ಯಾರ್ಥಿಗಳಿಂದ ತೆರೆಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ 34 ಬ್ಯಾಂಕ್ ಪಾಸ್‍ಬುಕ್‍ಗಳು, 106 ಕ್ರೆಡಿಟ್, ಡೆಬಿಟ್ ಕಾರ್ಡ್‍ಗಳು, 39 ಬ್ಯಾಂಕ್ ಚೆಕ್‍ಬುಕ್‍ಗಳು ಹಾಗೂ 75 ಸಾವಿರ ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News