ಸಾಮಾಜಿಕ ನ್ಯಾಯವಿಲ್ಲದ ಬಜೆಟ್ ಪೂರ್ವ ಸಭೆ : ಮುಖ್ಯಮಂತ್ರಿ ಚಂದ್ರು

Update: 2025-02-19 19:33 IST

ಬೆಂಗಳೂರು : ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಲು ಸಿಎಂ ನಡೆಸುತ್ತಿರುವ ಬಜೆಟ್ ಪೂರ್ವಭಾವಿ ಸಭೆಗಳಿಗೆ ಅಲ್ಪಸಂಖ್ಯಾತರ ಮುಖಂಡರುಗಳನ್ನು ಕರೆದು ಸಭೆ ನಡೆಸದಿರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಸಾಕಾರಕ್ಕೆ ಧಕ್ಕೆ ತರುವಂತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ಈ ಸಂಬಂಧ ಸಿಎಂಗೆ ಪತ್ರ ಬರೆದಿರುವ ಅವರು, ಈಗಾಗಲೇ ದಲಿತ ಹಾಗೂ ಹಿಂದುಳಿದ ವರ್ಗಗಳ ಸಂಘ-ಸಂಸ್ಥೆಗಳು ಮತ್ತು ನಾಯಕರುಗಳ ಸಭೆಗಳನ್ನು ನಡೆಸಿ ಸಿಎಂ, ಅವರ ಬೇಡಿಕೆಗಳನ್ನು ಆಲಿಸಿ ಬಜೆಟ್ ಪೂರ್ವ ತಯಾರಿಯನ್ನು ನಡೆಸಿದ್ದಾರೆ. ಆದರೆ, ರಾಜ್ಯದ ಅಲ್ಪಸಂಖ್ಯಾತರ ಯಾವುದೇ ಸಭೆಯನ್ನು ಇದುವರೆಗೂ ನಡೆಸದೆ ಇರುವುದು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಧಕ್ಕೆ ತರುವಂತಿದೆ. ಕೇವಲ ತಮ್ಮ ಮಂತ್ರಿಮಂಡಲದ ಪ್ರಮುಖ ಸಚಿವರೊಬ್ಬರೇ ಎಲ್ಲ ಅಲ್ಪಸಂಖ್ಯಾತರ ಧ್ವನಿ ಎಂಬಂತೆ ಭಾಸವಾಗುತ್ತಿರುವುದು ಕಂಡುಬರುತ್ತಿದೆ ಎಂದು ಟೀಕಿಸಿದ್ದಾರೆ.

ಅಲ್ಪಸಂಖ್ಯಾತರಲ್ಲಿ ಮುಸ್ಲಿಮ್ ಸಮುದಾಯದವರೊಂದಿಗೆ ಕ್ರೈಸ್ತ, ಜೈನ, ಬೌದ್ಧ, ಪಾರ್ಸಿ, ಸಿಖ್ ಸಮುದಾಯಗಳು ಸಹ ಸೇರಿರುವುದು ಆಳುವವರು ಮರೆಯುತ್ತಿರುವಂತಿದೆ. ಆದುದರಿಂದ ಕೂಡಲೇ ಅಲ್ಪಸಂಖ್ಯಾತರ ಎಲ್ಲ ವರ್ಗಗಳ ಮುಖಂಡರುಗಳನ್ನು, ಸಂಘ-ಸಂಸ್ಥೆಗಳನ್ನು ತಮ್ಮ ಬಜೆಟ್ ಪೂರ್ವ ಸಭೆಗೆ ಕರೆದು ಅವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News