ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸುವುದಿಲ್ಲ : ಸಚಿವ ಕೆ.ಎಚ್.ಮುನಿಯಪ್ಪ

Update: 2024-12-12 17:41 GMT

ಕೆ.ಎಚ್.ಮುನಿಯಪ್ಪ

ಬೆಳಗಾವಿ : ರಾಜ್ಯದಲ್ಲಿನ ಯಾವುದೇ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸುವುದಿಲ್ಲ. ಈ ಹಿಂದೆ ರದ್ದುಪಡಿಸಿದ್ದ ಬಿಪಿಎಲ್ ಪಡಿತರ ಚೀಟಿಯನ್ನು ಮರು ಸೇರ್ಪಡೆ ಮಾಡಲಾಗಿದೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರಾಜೇಶ್ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಗಿಂತ ಹೆಚ್ಚು ಇರುವ ಕುಟುಂಬ ಮತ್ತು ಸರಕಾರಿ ನೌಕರರನ್ನು ಹೊರತುಪಡಿಸಿ ಯಾವುದೇ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಪಡಿಸುವುದಿಲ್ಲ. ರಾಜ್ಯದಲ್ಲಿ ಒಟ್ಟು 1.53 ಕೋಟಿ ಪಡಿತರ ಚೀಟಿಗಳಿವೆ ಎಂದು ವಿವರ ನೀಡಿದರು.

3 ಲಕ್ಷಕ್ಕೂ ಅಧಿಕ ಪಡಿತರ ಚೀಟಿಗಳಲ್ಲಿ ಗೊಂದಲವಿದ್ದು, ಹೊಸದಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ವಹಿಸಲಾಗುವುದು. ಅರ್ಹರಿಗೆ ಯಾವುದೇ ಸಂದರ್ಭದಲ್ಲಿಯೂ ಪಡಿತರ ಚೀಟಿ ರದ್ದು ಮಾಡಲಾಗುವುದಿಲ್ಲ ಎಂದ ಮುನಿಯಪ್ಪ, ಅರ್ಹ ಪಡಿತರ ಚೀಟಿದಾರರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಇದೇ ಸಂದರ್ಭದಲ್ಲಿ ಅಭಯ ನೀಡಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ರಾಜೇಶ್ ನಾಯಕ್, ನೈಜ ಬಿಪಿಎಲ್ ಕಾರ್ಡ್‍ದಾರರು 2-3 ತಿಂಗಳ ಕಾಲ ಕಾರಣಾಂತರಗಳಿಂದ ಪಡಿತರ ಪಡೆಯದಿದ್ದರೆ ಹಠಾತ್ ರದ್ದುಪಡಿಸಲಾಗುತ್ತಿದೆ. ಇದನ್ನು ಸರಿಪಡಿಸಬೇಕು. ಅಲ್ಲದೆ, ಹೊಸ ಕಾರ್ಡ್‍ಗೆ ಸಂಬಂಧಿಸಿದ ಅರ್ಜಿಯನ್ನು ಜಿಲ್ಲಾ ಮಟ್ಟದಲ್ಲೇ ವಿಲೇವಾರಿ ಮಾಡಬೇಕು ಎಂದರು. ಇದಕ್ಕೆ ಸ್ಪಂದಿಸಿದ ಸಚಿವರು, ಜಿಲ್ಲಾ ಮಟ್ಟದಲ್ಲೇ ವಿಲೇವಾರಿ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News