ಅವಕಾಶ ವಂಚಿತರಿಗೆ ಸಾಮಾಜಿಕ ನ್ಯಾಯ ದೊರಕಿಸುವ ಜಾತಿಗಣತಿ ನಡಸಲು ಕಾಂಗ್ರೆಸ್‌ ಬದ್ಧ : ಸಿಎಂ ಸಿದ್ದರಾಮಯ್ಯ

Update: 2024-05-04 17:34 GMT
Photo : x/@siddaramaiah

ಚಿಕ್ಕೋಡಿ: ದೇಶದ 140 ಕೋಟಿ ಜನರಲ್ಲಿ ಸೌಲಭ್ಯ ವಂಚಿತರಿಗೆ ಸಾಮಾಜಿಕ ನ್ಯಾಯ ದೊರಕಿಸಲು ಜಾತಿ ಗಣತಿ ಮಾಡಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಲೋಕಸಭಾ ಚುನಾವಣೆಯ ನಿಮಿತ್ತ ಚಿಕ್ಕೋಡಿ ನಗರದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ -02 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪಕ್ಷದ ಅಭ್ಯರ್ಥಿಯಾದ ಪ್ರಿಯಾಂಕಾ ಜಾರಕಿಹೊಳಿ ಅವರ ಪರವಾಗಿ ಮತದಾರರಲ್ಲಿ ಮತ ಯಾಚನೆ ಮಾಡಿ ಮಾತನಾಡಿದರು.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ

ಕೇಂದ್ರದಿಂದ ರಾಜ್ಯಕ್ಕೆ ಕಳೆದ ಬಾರಿ 25 ಜನ ಸಂಸದರನ್ನು ಬಿಜೆಪಿಯಿಂದ ಆಯ್ಕೆ ಮಾಡಿ ಕಳಿಸಲಾಯಿತು. ನಮಗಾದ ಅನ್ಯಾಯದ ಬಗ್ಗೆ ಯಾರೂ ಬಾಯಿ ಬಿಡಲಿಲ್ಲ. ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಯಿತು, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಕೊಡಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲ ಬಂದರೂ ಪರಿಹಾರ ನೀಡಲಿಲ್ಲ. 35000 ಕೋಟಿ ರೂ.ಗಳ ನಷ್ಟವಾಯಿತು. 18171 ಕೋಟಿ ರೂಪಾಯಿಗಳ ಪರಿಹಾರ ಕೇಳಿದರೂ 7 ತಿಂಗಳ ಕಾಲ ನಮಗೆ ಕೊಡಲಿಲ್ಲ. ರಾಜ್ಯಕ್ಕೆ ಅನ್ಯಾಯವಾಗಿದ್ದರಿಂದ ಸುಪ್ರೀಂ ಕೋರ್ಟ್‌ಗೆ ಅನಿವಾರ್ಯವಾಗಿ ಹೋಗಬೇಕಾಯಿತು. ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದ ಮೇಲೆ ನಮಗೆ 3454 ಕೋಟಿ ರೂಪಾಯಿಯ ಅಲ್ಪ ಪರಿಹಾರ ದೊರಕಿದೆ. ಬಾಕಿ ಪರಿಹಾರಕ್ಕೆ ಇನ್ಮೆಷ್ಟು ದಿನ‌ ಕಾಯಬೇಕೋ ಗೊತ್ತಿಲ್ಲ ಎಂದರು.

ಅಂಬೇಡ್ಕರ್ ಅವರ ಆಶಯಗಳ ದಾರಿಯಲ್ಲಿ ಕಾಂಗ್ರೆಸ್

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದಲ್ಲಿಯೂ ಎಲ್ಲರಿಗೂ ಸಮಾನ ಅವಕಾಶ, ಹಕ್ಕುಗಳು, ಈ ದೇಶದ ಸಂಪತ್ತು ಹಂಚಿಕೆಯಾಗಬೇಕು ಎಂದು ಹೇಳಿದ್ದಾರೆ. ಅವಕಾಶ ವಂಚಿತರಿಗೆ ಸಾಮಾಜಿಕ , ಆರ್ಥಿಕ ಅವಕಾಶ ದೊರೆತಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂದರು.

25 ಗ್ಯಾರಂಟಿ ಘೋಷಣೆ

ಎಐಸಿಸಿ ಕೂಡ 25 ಗ್ಯಾರಂಟಿ ಘೋಷಣೆ ಮಾಡಿದೆ. ಪ್ರಮುಖವಾಗಿ 5 ಗ್ಯಾರಂಟಿ ಪತ್ರಕ್ಕೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಸಹಿ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಒಂದು ವರ್ಷಕ್ಕೆ ಒಂದು ಲಕ್ಷ ರೂಪಾಯಿ, ನಿರುದ್ಯೋಗಿ ಯುವಕರಿಗೆ 1 ಲಕ್ಷ ರೂಪಾಯಿ, ರೈತರ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು. ಸ್ವಾಮಿನಾಥನ್ ವರದಿ ಶಿಫಾರಸ್ಸುಗಳನ್ನು ಜಾರಿ ಮಾಡಲಾಗುವುದು. ಎಂ.ಎಸ್.ಪಿ ಗೆ ಕಾನೂನು ತಂದು ಕಾನೂನಿನ ಚೌಕಟ್ಟಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದರು.

ಮೋದಿ ಅಚ್ಛೇ ದಿನ್ ಬರಲಿಲ್ಲ

ಹತ್ತು ವರ್ಷಗಳಾದರೂ ಈವರೆಗೆ ಯಾರ ಖಾತೆಗೂ 15 ರೂ. ಕೂಡ ಬಂದಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದವರು. ನಿರುದ್ಯೋಗಿ ಯುವಕರು ಕೆಲಸ ಕೊಡಿ ಎಂದರೆ ಪಕೋಡ ಮಾರಿ ಎಂದು ಅತ್ಯಂತ ಬೇಜವಾಬ್ದಾರಿ ಉತ್ತರ ನೀಡಿದರು. ಇವರು ಈ ದೇಶದ ಪ್ರಧಾನಿಯಾಗಲು ಯೋಗ್ಯರೇ ಇಲ್ಲವೋ ಎಂದು ವಿಚಾರ ಮಾಡಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News