ಸಹಕಾರ ಕ್ಷೇತ್ರ ರಾಜಕೀಯದಿಂದ ದೂರವಿರಬೇಕು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2024-11-20 13:10 GMT

ಲಕ್ಷ್ಮಿ ಹೆಬ್ಬಾಳ್ಕರ್ | PC : x/@laxmi_hebbalkar

ಬೆಳಗಾವಿ : ‘ನಮ್ಮಿಂದ ನೀವು, ನಿಮ್ಮಿಂದ ನಾವು ಎನ್ನುವುದೇ ಸಹಕಾರಿ ತತ್ವ. ಸಹಕಾರಿ ಕ್ಷೇತ್ರ ಬೆಳೆದರೆ ರಾಜ್ಯ ಬೆಳೆಯುತ್ತದೆ, ದೇಶ ಬೆಳೆಯುತ್ತದೆ. ರಾಜಕೀಯ ರಹಿತವಿದ್ದಾಗ ಮಾತ್ರ ಸಹಕಾರ ಕ್ಷೇತ್ರ ವಿಶ್ವಾಸಾರ್ಹವಾಗಿ ಬೆಳೆಯಲು ಸಾಧ್ಯ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಬುಧವಾರ ಇಲ್ಲಿನ ಕೆಎಲ್ಇ ಸಂಸ್ಥೆಯ ಜಿಎನ್ಎಂಸಿ ಡಾ.ಬಿ.ಎಸ್ ಜೀರಗೆ ಸಭಾಂಗಣದಲ್ಲಿ ನಡೆದ 71ನೆ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ನಮ್ಮ ಇಡೀ ವ್ಯವಸ್ಥೆ ಸಹಕಾರ ತತ್ವದ ಮೇಲೆಯೇ ನಿಂತುಕೊಂಡಿದೆ. ನಾವು ಹುಟ್ಟಿದಾಗಿನಿಂದ ಸಾಯುವವರೆಗೂ ಪರಸ್ಪರ ಸಹಕಾರದಿಂದಲೇ ಬದುಕುತ್ತೇವೆ. ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎನ್ನುವುದು ಸಹಕಾರ ತತ್ವದ ಮೂಲ ಆಶಯ ಎಂದರು.

ಸಹಕಾರ ಚಳುವಳಿಯ ರೂವಾರಿಯೇ ನಮ್ಮ ಅಂದಿನ ಪ್ರಧಾನಿ ನೆಹರು. ಸಹಕಾರ ತತ್ವ, ಆಚರಣೆಯಲ್ಲಿ ನೆಹರೂ ಅವರಿಗೆ ಅಪಾರವಾದ ನಂಬಿಕೆ ಮತ್ತು ನಿಷ್ಠೆ ಇತ್ತು. ಭಾರತದ ಸಹಕಾರ ಚಳವಳಿಯ ಆರೋಗ್ಯಕರ ಬೆಳವಣಿಗೆಗೆ ನೆಹರು ಅವರ ಶ್ರಮ ಅಪಾರವಾಗಿತ್ತು. ಭಾರತವನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ತತ್ವದ ಮೊರೆ ಹೋಗಿದ್ದರು ಎಂದು ಅವರು ಸ್ಮರಿಸಿದರು.

ಸಹಕಾರ ತತ್ವದಿಂದಲೇ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ನೆಹರು ಅವರು ನಂಬಿದ್ದರು. ರಾಷ್ಟ್ರದಲ್ಲಿ ಸಹಕಾರ ಚಳವಳಿ ಪ್ರಗತಿಪಥದಲ್ಲಿ ಸಾಗಲು ಕ್ರಮಗಳನ್ನು ಕೈಗೊಂಡರು. ನೆಹರು ಅವರ ದೂರದೃಷ್ಟಿಯ ಫಲದಿಂದ ಇಂದು ಸಹಕಾರ ಚಳವಳಿ ವೈಶಿಷ್ಟ್ಯಪೂರ್ಣವಾಗಿ ಬೆಳೆದಿದೆ ಎಂದರು.

ಇಡೀ ರಾಷ್ಟ್ರದ ಸಹಕಾರ ತತ್ವಕ್ಕೆ ನಮ್ಮ ಕರ್ನಾಟಕದ ಕೊಡುಗೆ ಅನನ್ಯವಾಗಿದೆ. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಕೃಷಿ ಪತ್ತಿನ ಸಹಕಾರ ಕ್ಷೇತ್ರಕ್ಕೆ ಬುನಾದಿ ಹಾಕಿದ್ದು ಕರ್ನಾಟಕ ರಾಜ್ಯ. 1904ರಲ್ಲಿ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಸಣ್ಣರಾಮನಗೌಡ ಸಿದ್ದರಾಮನಗೌಡ ಪಾಟೀಲ ಅವರು ಸಮಾನ ಮನಸ್ಕ ರೈತರನ್ನು ಒಗ್ಗೂಡಿಸಿ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪಿಸಿದರು. ಆ ನಂತರದಲ್ಲಿ ಸಹಕಾರ ಚಳವಳಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯುತ್ತ ಹೋಯಿತು ಎಂದು ಹೇಳಿದರು.

ಕರ್ನಾಟಕದ ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಬಹುತೇಕ ರಾಜಕಾರಣಿಗಳು ಸಹಕಾರ ಕ್ಷೇತ್ರದಿಂದಲೇ ಮೇಲೆ ಬಂದವರು. ಇಡೀ ಕೃಷಿ ಕ್ಷೇತ್ರ ಸಹಕಾರ ಸಂಘಗಳ ಮೇಲೆಯೇ ಅವಲಂಭಿಸಿದೆ. ಸಹಕಾರ ಸಂಘಗಳ ಮೇಲೆ ನಮ್ಮ ರೈತರಿಗೆ ಅಪಾರವಾದ ನಂಬಿಕೆ, ವಿಶ್ವಾಸವಿದೆ. ರೈತರಿಗೆ ಅಗತ್ಯವಿರುವ ಸಾಲ ನೀಡುವ ಮೂಲಕ ಸಹಕಾರ ಸಂಘಗಳು ರೈತರ ಬೆನ್ನಿಗೆ ನಿಲ್ಲುತ್ತವೆ. ರಾಜಕೀಯದಲ್ಲಿ ಸಹಕಾರ ಇರಬೇಕು, ಆದರೆ ಸಹಕಾರ ಸಂಘಗಳಲ್ಲಿ ರಾಜಕೀಯ ಇರಬಾರದು ಎಂದರು.

ಸಹಕಾರ ಸಂಘಗಳಲ್ಲಿ ರಾಜಕೀಯ ಸೇರಿದರೆ ಅದರ ಅವನತಿ ಆರಂಭವಾದಂತೆ. ಅತ್ಯಂತ ನೋವಿನ ಸಂಗತಿ ಎಂದರೆ, ರಾಜಕೀಯ ಸೇರಿದ್ದರಿಂದಲೆ ನಮ್ಮ ರಾಜ್ಯದಲ್ಲಿ ಹಲವಾರು ಸಹಕಾರ ಸಂಘಗಳು ಬಾಗಿಲು ಮುಚ್ಚಿವೆ. ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳು ಸಹಕಾರ ತತ್ವದ ಮೇಲೆ ಆರಂಭವಾಗಿ ಮುನ್ನಡೆಯುತ್ತಿವೆ.

ಕೆಲವು ಮುಚ್ಚಿದ್ದರೂ ಇನ್ನೂ ಅನೇಕ ಕಾರ್ಖಾನೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಪಾರದರ್ಶಕವಾಗಿ ನಡೆದಾಗ ಮಾತ್ರ ಸಹಕಾರ ಸಂಘಗಳು ಯಶಸ್ವಿಯಾಗಲು ಸಾಧ್ಯ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಶಾಸಕರಾದ ಆಸೀಫ್ ಸೇಠ್, ಅಶೋಕ್ ಪಟ್ಟಣ್, ಲಕ್ಷ್ಮಣ್ ಸವದಿ, ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News