ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಪ್ರತಿ ದೂರು
ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಲ್ಲೇಖಿಸಿ ಮಾನಹಾನಿ ಪದಬಳಕೆ ಆರೋಪದಡಿ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಬಂಧನ ಬೆನ್ನಲ್ಲೇ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿ ದೂರು ದಾಖಲಾಗಿದೆ.
"ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸದನದಲ್ಲೇ ನನ್ನನ್ನು ‘ಕೊಲೆಗಡುಕ’ ಎಂದು ನಿಂದನೆ ಮಾಡಿದ್ದು, ಅಲ್ಲದೇ ಅವರ ಬೆಂಬಲಿಗರನ್ನು ಸುವರ್ಣ ಸೌಧಕ್ಕೆ ನುಗ್ಗಿಸಿ ನನ್ನ ಹತ್ಯೆಗೆ ಯತ್ನಿಸಿದ್ದಾರೆ" ಎಂದು ಆರೋಪಿಸಿ ಸಿ.ಟಿ.ರವಿ ಪ್ರತಿ ದೂರು ದಾಖಲಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉಲ್ಲೇಖಿಸಿ ಮಾನಹಾನಿ ಪದಬಳಕೆ ಆರೋಪದಡಿ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೇ ಇಲ್ಲಿನ ಹಿರೇಬಾಗೇವಾಡಿ ಠಾಣಾ ಪೊಲೀಸರು ಬಂಧಿಸಿದ್ದರು.
ಗುರುವಾರ ವಿಧಾನ ಪರಿಷತ್ತಿನಲ್ಲಿ ತನ್ನನ್ನು ಉಲ್ಲೇಖಿಸಿ ಮಾನಹಾನಿ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಸ್ವಯಂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯಾಹ್ನ 1 ಗಂಟೆಗೆ ದೂರು ನೀಡಿದ್ದರು. ಅದರಂತೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 75 ಮತ್ತು 79ರ ಅಡಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ಇದೇ ವೇಳೆ ಖಾನಾಪುರ ಪಟ್ಟಣ ಠಾಣೆಯಲ್ಲಿ ಗುರುವಾರ ರಾತ್ರಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಮ್ಮ ದೂರು ದಾಖಲಿಸಿದರು. ವಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ವಿಠ್ಠಲ ಹಲಗೇಕರ, ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ್ ಹಾಗೂ ಮಾಜಿ ಶಾಸಕ ಅಂಜಯ ಪಾಟೀಲ್ ಅವರೂ ತಡರಾತ್ರಿಯವರೆಗೂ ಠಾಣೆಯಲ್ಲೇ ಇದ್ದರು.